ಬೆಂಗಳೂರು : ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಧರಣಿಯನ್ನು ಮುಕ್ತಾಯಗೊಳಿಸಿದ್ದು, ಸರ್ಕಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ 24 ಗಂಟೆಗಳ ಧರಣಿ ಮುಕ್ತಾಯಕ್ಕೂ ಮುನ್ನ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಳೆಯಿಂದ ಐದು ದಿನಗಳ ಕಾಲ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆಂದರು.
ಮನವಿ ಪತ್ರವನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ನೀಡುತ್ತೇವೆ. ಸರ್ಕಾರ ನಿಯೋಜಿಸುವ ಯಾವುದೇ ವಿಧದ ಅನೇಕ ಸಂಸ್ಥೆಗಳಿಂದ ಪ್ರಾಮಾಣಿಕ ತನಿಖೆ ನಡೆಯುವ ವಿಶ್ವಾಸವಿಲ್ಲ. ನಿಷ್ಪಕ್ಷಪಾತ ತನಿಖೆಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತಂಡದಿಂದ ನಡೆಸಲು ಒತ್ತಾಯಿಸುತ್ತೇವೆಂದರು.
ಈಶ್ವರಪ್ಪ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಇದು ರಾಜಕೀಯಕ್ಕೋಸ್ಕರವಲ್ಲ. ಸಂತೋಷ್ ಕುಟುಂಬಕ್ಕೆ ನ್ಯಾಯ, ಪರಿಹಾರ ಸಿಗಬೇಕು. ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ಮಾಡುವುದೇ ನಮ್ಮ ಉದ್ದೇಶವೆಂದರು. ನಿನ್ನೆ ನಾವು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾಗಿದ್ದೆವು.
ಆದರೆ, ಮಾರ್ಗಮಧ್ಯೆ ನಮ್ಮನ್ನು ತಡೆಯಲಾಯಿತು. ಹೈಗ್ರೌಂಡ್ಸ್ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಹಲವು ಕಾರ್ಯಕರ್ತರನ್ನು ಬೇರೆಡೆ ಕರೆದೊಯ್ದರು. ಕೆಲ ಹೊತ್ತಿನ ನಂತರ ನಮ್ಮನ್ನು ಬಿಡುಗಡೆಗೊಳಿಸಿದರು. ಅಲ್ಲಿಂದ ಹೊರ ಬಂದ ನಂತರ ನಾವು 24 ಗಂಟೆ ವಿಧಾನಸೌಧದಲ್ಲಿ ಧರಣಿ ನಡೆಸುವ ತೀರ್ಮಾನ ಕೈಗೊಂಡು, ಧರಣಿ ನಡೆಸಿದ್ದೇವೆಂದರು.
ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಾಗಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಎಫ್ಐಆರ್ನಲ್ಲಿ ಈ ವಿಚಾರವನ್ನು ಕೈಬಿಡಲಾಗಿದೆ. ಇದು ಸರಿಯಲ್ಲ, ಭ್ರಷ್ಟಾಚಾರ ವಿಷಯದೊಂದಿಗೆ ಪ್ರಕರಣ ದಾಖಲಾಗಬೇಕು ಎಂಬುದು ಕಾಂಗ್ರೆಸ್ ಒತ್ತಾಯವಾಗಿದೆ. ಅಲ್ಲದೇ, ಸಂತೋಷ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಬಿಎ ಪದವೀಧರೆಯಾಗಿರುವ ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು.
ಸಂತೋಷ್ ಕಾಮಗಾರಿ ನಡೆಸಿರುವ ನಾಲ್ಕು ಕೋಟಿ ರೂಪಾಯಿಯನ್ನು ಕೂಡಲೇ ಸರ್ಕಾರ ಪಾವತಿಸಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದಿಂದ 11ಲಕ್ಷ ರೂಪಾಯಿ ಪರಿಹಾರವನ್ನು ಕುಟುಂಬಕ್ಕೆ ನೀಡುತ್ತೇವೆಂದು ತಿಳಿಸಿದರು. ಇನ್ನೂ ನಾವು ಬೆಳಗಾವಿಗೆ ತೆರಳಿ ಸಂತೋಷ್ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇವೆ, ಧೈರ್ಯ ತುಂಬಿದ್ದೇವೆ ಎಂದರು.
ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ.. ಈಶ್ವರಪ್ಪನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ!