ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಧಾರವಾಡ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿದ್ದು, ವಿನಯ್ಗೆ ಸಂಕಷ್ಟ ಮುಂದುವರಿದಿದೆ.
ಕಳೆದ ಎರಡೂವರೆ ತಿಂಗಳಿಂದ ಜೈಲು ಹಕ್ಕಿಯಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಲ್ಲಿನ ಹೈಕೋರ್ಟ್ ಪೀಠ ಜಾಮೀನು ನೀಡಲು ನಿರಾಕರಿಸಿದೆ. ಗುರುವಾರ ಒಂದು ಗಂಟೆಗಳ ಕಾಲ ವಾದ ಪ್ರತಿವಾದ ನಂತರ ನ್ಯಾಯಪೀಠ ವಿನಯ್ ಅವರ ಜಾಮೀನು ಅರ್ಜಿ ವಜಾಗೊಳಿಸಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲರು ಶಶಿಕಿರಣ ಶೆಟ್ಟಿ ಹಾಗೂ ಬಾಹುಬಲಿ ಧನವಾಡೆ ವಾದ ಮಂಡಿಸಿದರು. ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಪ್ರತಿವಾದಿಸಿದರು.
ಇದಕ್ಕೂ ಮೊದಲು ಧಾರವಾಡದ ಜಿಲ್ಲಾ ನ್ಯಾಯಾಲಯದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಹ ವಿನಯ್ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು. ಆಮೇಲೆ ವಿನಯ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ, ವಿನಯ್ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗುವ ನಿರೀಕ್ಷೆಯಿದೆ.