ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಕುರಿತ ವಿಚಾರ ಪ್ರಸ್ತಾಪದ ವೇಳೆ ಪದೇ ಪದೇ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಹಕ್ಕುಚ್ಯುತಿ ಪ್ರಸ್ತಾಪಿಸಿದ ಸಿದ್ದರಾಮಯ್ಯನವರು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡುವಾಗ, ಸಭಾಧ್ಯಕ್ಷರ ಪೀಠವನ್ನು ಉದ್ದೇಶಿಸಿ ಆಕ್ಷೇಪಾರ್ಹ ಪದ ಬಳಸಿದ್ದಾರೆ. ಸುಪ್ರೀಂಕೋರ್ಟ್‍ನ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ್ದಾರೆ ಎಂದು ಹೇಳಿದಾಗ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ನಾವು ಸುಪ್ರೀಂಕೋರ್ಟ್‍ನ ತೀರ್ಪನ್ನಷ್ಟೇ ಉಲ್ಲೇಖಿಸಿದ್ದೇನೆ. ಉಲ್ಲೇಖಿಸಲು ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು. ಸುಧಾಕರ್ ಅವರು ಸಂವಿಧಾನ ಕುರಿತು ಮಾತನಾಡುವ ಸಂದರ್ಭದಲ್ಲಿ ಹೇಳಿರುವುದನ್ನು ಅಷ್ಟೇ ಉಲ್ಲೇಖಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಈ ಹಂತದಲ್ಲಿ ಕ್ರಿಯಾಲೋಪ ಎತ್ತಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು, ಹಕ್ಕುಚ್ಯುತಿ ವಿಚಾರಕ್ಕೆ ಸೀಮಿತವಾಗಿ ಮಾತನಾಡಬೇಕು. ಶಾಸಕರು ಭಾಷಣ ಪೂರ್ಣ ಮಾಡಲು ಅವಕಾಶ ನೀಡದಿರುವುದೇ ಹಕ್ಕುಚ್ಯುತಿಯಾಗಿದೆ ಎಂದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹಕ್ಕುಚ್ಯುತಿ ವಿಚಾರಕ್ಕೆ ಸೀಮಿತವಾಗಿ ಮಾತನಾಡಬೇಕು ಎಂದರು. ಕಾಂಗ್ರೆಸ್ ಶಾಸಕರಾದ ದಿನೇಶ್ ಗುಂಡೂರಾವ್ ಮತ್ತು ಕೃಷ್ಣಭೈರೇಗೌಡ ಅವರು, ಸಚಿವರು ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಹೇಳುತ್ತಿದ್ದಾರೆ, ಹಕ್ಕುಚ್ಯುತಿ ಹೇಗಾಗಿದೆ? ಎಂಬುದನ್ನು ಪ್ರತಿಪಕ್ಷದ ನಾಯಕರು ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು ಎಂದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಹಕ್ಕುಚ್ಯುತಿಗೆ ಸೀಮಿತವಾಗಿ ಮಾತನಾಡಿ, ಸಭಾಧ್ಯಕ್ಷರ ಪೀಠದಿಂದ ತೀರ್ಮಾನ ಕೊಟ್ಟಾಗಿದೆ. ಅವತ್ತಿನ ಹಿನ್ನೆಲೆ ಚರ್ಚೆ ಬೇಡ ಎಂಬ ಸಲಹೆ ನೀಡಿದರು. ಆಗ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದಂತೆ ಪದೇ ಪದೇ ಬಿಜೆಪಿ ಶಾಸಕರು, ಸಚಿವರು ಆಕ್ಷೇಪಿಸಿದ್ದರಿಂದ ಪರಸ್ಪರ ವಾಗ್ವಾದ ನಡೆಯಿತು. ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಭಾಧ್ಯಕ್ಷರ ಪೀಠದಲ್ಲಿ ಕುಳಿತವರು ಪಕ್ಷಾತೀತವಾಗಿ ಇರಬೇಕು. ಪ್ರವೋಕ್ ಮಾಡಿ, ಹೀಯಾಳಿಸಿ ತೇಜೋವಧೆ ಮಾಡುವುದಲ್ಲ ಎಂದು ಹೇಳಿದ್ರು.
ಈ ವೇಳೆ ಸಿದ್ದರಾಮಯ್ಯ ಮತ್ತು ಸಚಿವರ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ರಾತ್ರೋರಾತ್ರಿ ನಾವು ಓಡಿ ಹೋಗಿಲ್ಲ, ಹೇಳಿ ನೇರವಾಗಿಯೇ ಹೋಗಿದ್ದೇವೆ ಎಂದು ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಪ್ರಸ್ತಾಪಕ್ಕೆ ತಿರುಗೇಟು ನೀಡಿದರು. ಆಗ ಸಿದ್ದರಾಮಯ್ಯನವರು, ನೀವು 10 ಮಂದಿ ಸಚಿವರು ಒಂದಾಗಿದ್ದೀರಿ ಎಂಬುದು ಗೊತ್ತು. ಯಾಕೆ ಪದೇ ಪದೇ ಹೇಳುತ್ತೀರಿ, ರಮೇಶ್ ಕುಳಿತುಕೊಳ್ಳುವಂತೆ ಗದರಿದರು. ನಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ರು ಎಂದು ಸುಧಾಕರ್ ಹೇಳಿಕೆಯನ್ನು ಉಲ್ಲೇಖಿಸಿ ಯಾರು ಷಡ್ಯಂತ್ರ ಮಾಡಿದ್ರು ಅಂತಾ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಯಾರು ಷಡ್ಯಂತ್ರ ಮಾಡಿದ್ರು ಅಂತಾ ಆಫ್ ದ ರೆಕಾರ್ಡ್ ಹೇಳಿ. ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಕಾಲೆಳೆದರು. ಅದನ್ನು ಗಂಭೀರವಾಗಿ ಪರಿಗಣಿಸಿ ಕೈ ಮುಂದೆ ಹಿಡಿದ ಸಿದ್ದರಾಮಯ್ಯ ಸತ್ಯದ ಪ್ರಮಾಣ ಮಾಡಿದರು. ನಾವು ಬಹಳ ನೋವು ಅನುಭವಿಸಿದ್ದೇವೆ. ನಮ್ಮ ಅನರ್ಹತೆಯ ನೋವು ಅವರಿಗೆಲ್ಲಾ ಸಂತೋಷ ತಂದಿದೆ. ಆ ಸಂತೋಷವನ್ನು ಅವರೆಲ್ಲಾ ಬಹಳ ಅನುಭವಿಸಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಸುಧಾಕರ್ ಹೇಳಿದರು.
ಸುಧಾಕರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರಾದ ಶಿವರಾಮ ಹೆಬ್ಬಾರ್, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ನಾರಾಯಣಗೌಡ, ಅಂದು ನಮ್ಮ ಮೇಲೆ ಕ್ರಮ ಕೈಗೊಂಡ ನೀವು ರಾಮಲಿಂಗಾರೆಡ್ಡಿ ಮೇಲೆ ಯಾಕೆ ಕ್ರಮ ಜರುಗಿಸಲಿಲ್ಲ ಎಂದು ಪ್ರಶ್ನಿಸಿದರು. ನೀವೆಲ್ಲಾ ನನ್ನ ಸ್ನೇಹಿತರು ಕುಳಿತುಕೊಳ್ಳಿ ಎಂದು ಸಿದ್ದರಾಮಯ್ಯ ಸಮಾಧಾನ ಪಡಿಸಿದರು. ಶಿವರಾಮ ಹೆಬ್ಬಾರ್ ಮಾತನಾಡಿ, ಆ ಪೀಠದಲ್ಲಿ ಕೂತವರು ನಮ್ಮ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂಬ ದಾಖಲೆಗಳನ್ನು ತರಿಸಿ ನೋಡಿ ಎಂದರು. ಆಗ ಮಧ್ಯೆ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ದಯಮಾಡಿ ಆ ದಾಖಲೆಗಳನ್ನು ತರಿಸಿ ನೋಡಿ. ಅವರ ಅನುಪಸ್ಥಿತಿಯಲ್ಲಿ ಆ ಪೀಠದಲ್ಲಿ ಕುಳಿತು ಅವರ ಬಗ್ಗೆ ಅವಹೇಳನ ಮಾಡುವ ಮಾತುಗಳನ್ನು ಹೇಳಿದ್ದರೆ, ನಾನು ಈ ಸಾಲಿನಲ್ಲಿ ಕೂರಲು ಅರ್ಹನಲ್ಲ. ನಾನು ಅವರು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಹೆಣದಂತೆ ಕೂರಲು ಸಾಧ್ಯವಿಲ್ಲ ಎಂದರು.
ಡಾ.ಸುಧಾಕರ್ ಮಾತನಾಡಿ, ಅಂದು ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೇ ಪೀಠದಲ್ಲಿ ಕುಳಿತಿದ್ದ ರಮೇಶ್ ಕುಮಾರ್, ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಏನಪ್ಪ, ನೀನು ಅವರನ್ನೆಲ್ಲಾ ಗಿಣಿಗಳಂತೆ ಸಾಕಿದ್ರಿ. ಆದರೆ ಈಗ ಅವರೆಲ್ಲಾ ಕೊಕ್ಕರೆಗಳಾಗಿದ್ದಾರೆ ಎಂದು ಹೇಳಿದರು. ನಾನು ಸದನದ ಒಳಗೆ ಹೇಳಿಲ್ಲ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು. ಡಾ.ಸುಧಾಕರ್ ಬಳಸಿರುವ ಷಡ್ಯಂತ್ರ ಪದದಿಂದ ಹಕ್ಕುಚ್ಯುತಿಯಾಗಿದೆ. ಹಾಗಾಗಿ ಸುಧಾಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು. ಅವರನ್ನು ಸದನದಿಂದ ಅಮಾನತು ಮಾಡಬಹುದು, ಪಕ್ಷದಿಂದ ಉಚ್ಛಾಟಿಸಬಹುದು ಅಥವಾ ಹಕ್ಕು ಬಾಧ್ಯತಾ ಸಮಿತಿಗೆ ಒಪ್ಪಿಸಬಹುದು. ಒಟ್ಟಾರೆಯಾಗಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.