ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಇಡೀ ಕನ್ನಡ ಚಿತ್ರರಂಗ ನೊಂದಿತ್ತು. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯಕೊಂಡಿ ಕಳಚಿದೆ.
ನಾಗರಹಾವು ಹಾಗೂ ಶುಭಮಂಗಳ ಸಿನಿಮಾಗಳ ಖ್ಯಾತಿಯ ನಟ, ನಿರ್ದೇಶಕ ಶಿವರಾಂ ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆಯಷ್ಟೇ ನಟ ಶಿವರಾಂ ಪಾರ್ಥಿವ ಶರೀರಕ್ಕೆ ತ್ಯಾಗರಾಜನಗರ ನಿವಾಸದಲ್ಲಿ, ಕನ್ನಡ ಚಿತ್ರರಂಗದವರು, ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಇಂದು ಬೆಳಗ್ಗೆ ಕೂಡ 7.30ರ ಸುಮಾರಿಗೆ ಶಿವರಾಂ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಬೆಳಗ್ಗೆ 8ರಿಂದ 10.30ರವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಅಂತಿಮ ದರ್ಶನ ಪಡೆಯಲು, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹಿರಿಯ ನಟ ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ, ಜೈಜಗದೀಶ್, ರಾಕ್‌ಲೈನ್ ವೆಂಕಟೇಶ್, ನಟಿಯರಾದ ಸುಧಾರಾಣಿ, ಹೇಮಚೌಧರಿ, ಭಾರತಿ ವಿಷ್ಣುವರ್ಧನ್, ಅಭಿನಯ, ಸತ್ಯಭಾಮ, ನಿರ್ದೇಶಕ ಸೀತಾರಾಮ್, ನಿರ್ಮಾಪಕ ಕೆ ಮಂಜು, ಭಾ ಮಾ ಹರೀಶ್ ಹಾಗೂ ಸೋದರ ಭಾ ಮಾ ಗಿರೀಶ್, ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಸೇರಿದಂತೆ ಹಲವಾರು ಚಿತ್ರರಂಗದ ತಾರೆಯರು ಶಿವರಾಂ ಅವ್ರ ಅಂತಿಮ ದರ್ಶನ ಪಡೆದರು.
ಬೆಳಗ್ಗೆ ಸುಮಾರು 10.30ಕ್ಕೆ ಶಿವರಾಂ ಅವರ ಪಾರ್ಥಿವ ಶರೀರವನ್ನ ತ್ಯಾಗರಾಜನಗರದ ಅವರ ನಿವಾಸಕ್ಕೆ ತೆಗೆದುಕೊಂಡು ಬರಲಾಯಿತು. ಶಿವರಾಂ ನಿವಾಸದಲ್ಲಿ ನಟಿಯರಾದ ಸುಮಲತಾ ಅಂಬರೀಶ್ ಹಾಗೂ ಜಯಮಾಲ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಸುಮಲತಾ ಅವರು, ಶಿವರಾಮಣ್ಣ ಅಂತಲೇ ನಾವೆಲ್ಲ ಕರಿತಿದ್ವಿ. ಅಂಬರೀಶ್ ಜೊತೆಗೆ ನಾಗರಹಾವು ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ರು. ಇತ್ತೀಚೆಗೆ ಕರೆ ಮಾಡಿ ಮಾತನಾಡಿದ್ರು. ಕೊರೊನಾ ಬಂದು ಎಲ್ಲರೂ ದೂರ ಆಗ್ಬಿಟ್ಟಿದ್ದೀವಿ, ಒಟ್ಟಿಗೆ ಒಮ್ಮೆ ಸಿಗೋಣ ಎಂದಿದ್ರು. ಅದೇ ಕೊನೆ ಮಾತಾಗಿ ಹೋಗಿದೆ. ನಿಜಕ್ಕೂ ಕನ್ನಡ ಚಿತ್ರರಂಗದಲ್ಲಿ ಒಂದು ಎರಾ ಮುಗಿದು ಹೋಗಿದೆ ಎಂದು ಬೇಸರ ಹೊರ ಹಾಕಿದರು.
ಹಿರಿಯ ನಟಿ ಜಯಮಾಲ ಮಾತನಾಡಿ, ಯಾವುದೇ ಸಭೆ-ಸಮಾರಂಭ ಇರಲಿ, ಅಲ್ಲಿ ಶಿವರಾಮಣ್ಣ ಇರಬೇಕು, ಒಟ್ಟಿಗೆ ತಾಯಿ ಸಾಹೇಬ ಸಿನಿಮಾದಲ್ಲಿ ನಟಿಸಿದ್ವಿ ಅಂತಾ ಶಿವರಾಂ ಬಗ್ಗೆ ಅನೇಕ ವಿಚಾರಗಳನ್ನ ಮೆಲುಕು ಹಾಕಿದರು.
ಬ್ರಾಹ್ಮಣ ಸಂಪ್ರಾದಯದಂತೆ ಗೌರವ : ತ್ಯಾಗರಾಜನಗರದ ಮನೆಯಲ್ಲಿ ಕುಟುಂಬಸ್ಥರಿದ ಬ್ರಾಹ್ಮಣ ಸಂಪ್ರಾದಯದಂತೆ ಶಿವರಾಂ ಪಾರ್ಥಿವ ಶರೀರಕ್ಕೆ ಪೂಜೆ ಮಾಡಲಾಗಿದೆ. ನಂತರ ಆ್ಯಂಬುಲೆನ್ಸ್ ಮೂಲಕ ಬನಶಂಕರಿ ಚಿತಾಗಾರಕ್ಕೆ ಪಾರ್ಥಿವಶರೀರವನ್ನು ತರಲಾಯಿತು.
ಶಿವರಾಂ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಿನ್ನೆಲೆ ಕುಶಾಲು ತೋಪು ಸಿಡಿಸುವ ಮುಖಾಂತರ ಸರ್ಕಾರಿ ಗೌರವ ಸಲ್ಲಿಸಲಾಯಿತ್ತು. ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ಶಿವರಾಂ ಅವರ ಇಬ್ಬರು ಪುತ್ರರಾದ ರವಿಶಂಕರ್ ಹಾಗೂ ಲಕ್ಷ್ಮೀಶ್ ನೆರವೇರಿಸಿದರು. ಪೂಜೆ ಬಳಿಕ ಅಗ್ನಿ ಸ್ಪರ್ಶ ಮಾಡಲಾಯ್ತು.
ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಡಾ ಅಂಬರೀಶ್, ಶ್ರೀನಾಥ್, ಅನಂತ್ ನಾಗ್ ಹೀಗೆ ಕನ್ನಡದ ಎಲ್ಲ ಸೂಪರ್ ಸ್ಟಾರ್ಗಳ ಜೊತೆಯಲ್ಲಿ ಅಭಿನಯಿಸಿದ್ದ ಶಿವರಾಮಣ್ಣ ಇನ್ನು ನೆನಪು ಮಾತ್ರ..