ಬೆಂಗಳೂರು: ಕಾಂಗ್ರೆಸ್ನಲ್ಲಿರುವ ವೀರಶೈವ ಲಿಂಗಾಯತ ಶಾಸಕರ ಪ್ರತ್ಯೇಕ ಸಭೆ ಗುರುವಾರ ನಗರದಲ್ಲಿ ನಡೆಯಿತು. ನಗರದ ಖಾಸಗಿ ಹೊಟೇಲ್ನಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ ಖಂಡ್ರೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಹಲವು ಮಹತ್ವದ ವಿಚಾರಗಳ ಮೇಲೆ ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಎಂ.ಬಿ.ಪಾಟೀಲ್, ಆನಂದ ನ್ಯಾಮಗೌಡ, ಶರಣಬಸಪ್ಪ ದರ್ಶನಪೂರ, ಯಶವಂತರಾಯ ಗೌಡ, ಎಂಎಲ್ಸಿ ಚಂದ್ರಶೇಖರ ಪಾಟೀಲ್, ಶಾಸಕ ರಾಜಶೇಖರ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅಮರೇಗೌಡ ಬಯ್ಯಾಪುರ್, ಸಂಗಮೇಶ್, ಮೋಹನ್ ಕೊಂಡಜ್ಜಿ, ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು ಭಾಗಿಯಾಗಿದ್ದರು.
ಸಭೆಗೆ ಬರುತ್ತಿದ್ದಂತೆ ಗರಂ ಆಗಿದ್ದ ಎಂ.ಬಿ. ಪಾಟೀಲ್, ಸಭೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಮಾಧ್ಯಮಗಳಿಗೆ ಹೇಳುವುದು ಬೇಡ ಎಂದು ಹೇಳಿದ್ದೆನು. ಆದರೂ ಮಾಧ್ಯಮಗಳಿಗೆ ಮಾಹಿತಿ ಹೋಗಿದೆ ಎಂದು ಕೇಳಿದ್ದಾರೆ.
ಎಂ.ಬಿ.ಪಾಟೀಲ್ ಅವರನ್ನು ಸಮಾಧಾನ ಪಡಿಸಿದ ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ ಖಂಡ್ರೆ ನಾವು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಹೇಗೆ ಗೊತ್ತಾಗಿದೆ ಅಂತ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಜಾತಿ ಜನಗಣತಿಗೆ ವೀರಶೈವ ಮಹಾಸಭೆ ವಿರೋಧದ ಹಿನ್ನೆಲೆ ಸಭೆಯ ನಂತರ ಮಾತನಾಡಿದ ಮಾಜಿ ಸಚಿವ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಹೌದು ನಾವೇ ವಿರೋಧ ಮಾಡಿದ್ದು. ಈ ಬಗ್ಗೆ ಒಕ್ಕಲಿಗರು ಹಾಗೂ ಲಿಂಗಾಯತ ಜಂಟಿ ಸಭೆ ನಡೆಸಿದ್ದೆವು. ಸಮೀಕ್ಷೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಇಲ್ಲ, ಪಾಂಗ್ರೆಸ್ ಇಲ್ಲ. ಲಿಂಗಾಯತ ಮತ್ತು ಒಕ್ಕಲಿಗರು ಅಂತ ವಿರೋಧ ಮಾಡಿದ್ದು. ಜಾತಿ ಜನಗಣತಿಗೆ ವೀರಶೈವ ಮಹಾಸಭೆಯಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಹಿರಿಯರಾದಂತಹ ಶಾಮನೂರು ಶಿವಶಂಕರಪ್ಪನವರು ಊಟಕ್ಕೆ ಕರೆದಿದ್ರು. ಎಲ್ಲಾ ಸಮಾಜದ ನಾಯಕರು ಒಂದೆಡೆ ಸೇರಿ ತುಂಬಾ ದಿನದ ನಂತರ ಅಸೆಂಬ್ಲಿ ನಡೀತು. ಎಲ್ಲಾ ಒಂದು ಕಡೆ ಸೇರಿ ಊಟ ಮಾಡೋಣ. ಪಕ್ಷ ಸಂಘಟನೆ ಯಾವ ರೀತಿ ಮಾಡಬೇಕು ಎಂದು ಚರ್ಚೆ ಮಾಡಿದ್ವಿ ಎಂದರು.
ಲಿಂಗಾಯತ ಮತ ಬಿಜೆಪಿ ಕಡೆ ಇದೆ ಎನ್ನುವ ವಿಚಾರ ಮಾತನಾಡಿ, ನಾವು ಖಂಡಿತ ಈ ವಿಚಾರವನ್ನ ಚರ್ಚೆ ಮಾಡ್ತಿದ್ದೀವಿ. ಇವತ್ತು 13 ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದೇವೆ. ನಾವು ಈಗಾಗಲೇ ಎಲ್ಲಾ ಸಮುದಾಯದ ಉಪಜಾತಿಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ಪಕ್ಷಕ್ಕೆ ಸೆಳೆದುಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀವಿ. ಅನೇಕ ಮುಖಂಡರು ಮಠ ಮಾನ್ಯಗಳಿಗೆ ಭೇಟಿ ನೀಡಿ ಚರ್ಚೆ ಮಾಡ್ತಿದ್ದಾರೆ. ಲಿಂಗಾಯತ ಮತ ಬಿಜೆಪಿಗಷ್ಟೇ ಅಲ್ಲ, ಕಾಂಗ್ರೆಸ್ಗೂ ಇದೆ ಎಂದರು.
ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಮಾತನಾಡ್ತಾರೆ. ಸಿಎಲ್ಪಿ ನಾಯಕರು, ಕೆಪಿಸಿಸಿ ಅಧ್ಯಕ್ಷರು ಮಾತನಾಡ್ತಾರೆ. ಇದು ಸಾಕಷ್ಟು ಸೂಕ್ಷ್ಮ ವಿಚಾರ. ಇದು ನನ್ನ ವ್ಯಾಪ್ತಿಗೆ ಬರಲ್ಲ. ಇದೇ ಏನೇ ಇದ್ರೂ ನಾಯಕರಿಗೆ ಪ್ರಶ್ನೆ ಮಾಡಬೇಕು ಎಂದರು.
ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ನಮ್ಮ ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರು. ಪ್ರತಿ ಅಧಿವೇಶನದ ವೇಳೆ ಊಟಕ್ಕೆ ಆಹ್ವಾನ ಮಾಡ್ತಾರೆ. ನಾವೆಲ್ಲ ಶಾಸಕರು, ನಾಯಕರು ಸೇರಿ ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆ ಮಾಡಿದ್ವಿ. ಕೆಲವೊಂದು ಸಮಾಜದ ಆಗು-ಹೋಗುಗಳ ಬಗ್ಗೆ ಚರ್ಚೆ ಮಾಡಿದ್ವಿ. ಭವಿಷ್ಯದ ಯುವಕರ ಬಗ್ಗೆ ರಾಜ್ಯದ ಹಿತಾಸಕ್ತಿಗಾಗಿ ಚರ್ಚೆ ಮಾಡಿದ್ವಿ. ಮಧ್ಯಾಹ್ನ ನಡೆದ ಎರಡನೆ ಹಂತದ ನಾಯಕರ ಸಭೆ ವಿಚಾರ ಮಾತನಾಡಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಜಾತಿ ಸಮೀಕ್ಷೆ ವಿಚಾರ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಒಂದು ಮಾತು ಹೇಳ್ತೀನಿ. ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದ ಭಾವನೆಗಳನ್ನ ಅರಿತು ತೀರ್ಮಾನ ಮಾಡುತ್ತದೆ. ನಮ್ಮ ವರಿಷ್ಠರು, ಪಕ್ಷದ ಮುಖಂಡರು ತೀರ್ಮಾನಕ್ಕೆ ಬರ್ತಾರೆ. ಸಮುದಾಯದ ಅಭಿವೃದ್ಧಿಗೆ ಸಮೀಕ್ಷೆಯಾಗಿದೆ. ಇದರ ಬಗ್ಗೆ ಸರ್ಕಾರಕ್ಕಾಗಲಿ, ಸಮಿತಿಗಗಾಲಿ ಒಂದು ಸ್ಪಷ್ಟ ಮಾಹಿತಿ ಇಲ್ಲ. ಯಾವ ರೀತಿ ಮಾಡೋದು ಅನ್ನೋ ಮಾಹಿತಿ ಇಲ್ಲ. ಈಗ ಏನು ಇಲ್ಲದೇ ಸುಮ್ಮನೆ ಚರ್ಚೆ ಮಾಡೋದ್ರಲ್ಲಿ ಅರ್ಥ ಇಲ್ಲ ಎಂದರು.
ಇದನ್ನೂ ಓದಿ: ರಾಜೀನಾಮೆಗೆ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ: ಬಿಎಸ್ವೈ ಸ್ಪಷ್ಟನೆ