ಬೆಂಗಳೂರು: ನೂತನ ಮೋಟಾರು ಕಾಯ್ದೆಯಡಿ ವಿಧಿಸುತ್ತಿರೋದು ಕೇವಲ ದಂಡ ಅಲ್ಲ. ಇದು ಹಗಲು ದರೋಡೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದರು.
ಸಂಚಾರಿ ಪೊಲೀಸ್ ಪೇದೆ ಧಿರಿಸು ಧರಿಸಿ ನಗರದ ಹಲಸೂರು ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈ ಹಗಲು ದರೋಡೆಗೆ ಬಿಜೆಪಿ ಸರ್ಕಾರವೇ ಕಾರಣ. ಪಶ್ಚಿಮ ಬಂಗಾಳದಲ್ಲಿ ನೂತನ ಮೋಟರ್ ಕಾಯ್ದೆ ಜಾರಿಗೆ ಬಂದಿಲ್ಲ. ಅಲ್ಲಿನ ಜನಪ್ರತಿನಿಧಿಗಳು ಅಲ್ಲಿನ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳ ವಿರೋಧಿಸಿದರೂ ರಾಜ್ಯ ಸರ್ಕಾರ ವಿರೋಧಿಸಿಲ್ಲ. ನಮ್ಮ ರಾಜ್ಯದ ಎಂ.ಎಲ್.ಎ, ಎಂಪಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಅವೈಜ್ಞಾನಿಕ ಮೋಟಾರು ಕಾಯ್ದೆ ಸರಿ ಇಲ್ಲ. ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರಿಂದ ಎಷ್ಟೋ ಜನ ತಮ್ಮ ಗಾಡಿಗಳಿಗೆ ಬೆಂಕಿ ಇಟ್ಟಿದ್ದಾರೆ. ಇನ್ನು ಕೆಲವರು ಗಾಡಿಯನ್ನು ಮನೆಯಲ್ಲೇ ನಿಲ್ಲಿಸಿ ಮೆಟ್ರೋಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕಾಯ್ದೆ ತರುವ ಮುನ್ನ ಚರ್ಚೆಯಾಗಬೇಕಿತ್ತು. ಯಾವುದನ್ನೂ ಮಾಡದೆ ಬಡವರ ಮೇಲೆ ಬರೆ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.