ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾಲಿಟ್ಟ ಸಂದರ್ಭ ಯಾರೂ ಸಣ್ಣ ಯೋಚನೆಯನ್ನು ಸಹ ಮಾಡಿರಲಿಲ್ಲ, ಈ ವೈರಸ್ ನಮ್ಮನ್ನು ಹಾಗೂ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಬಿಡುತ್ತೆ ಅಂತ. ನೋಡ ನೋಡುತ್ತಿದ್ದಂತೆ ಕೊರೊನಾ ಹರಡುವಿಕೆ ಬೇರೆ ಸ್ವರೂಪವನ್ನೇ ಪಡೆದುಕೊಂಡು ಬಿಟ್ಟಿದೆ. ಸಣ್ಣ ಅಳುಕಿನಲ್ಲೇ ಕೊರೊನಾ ವಾರಿಯರ್ಸ್ ವೈರಸ್ ವಿರುದ್ಧ ಹೋರಾಡಲು ಸಿದ್ಧವಾದರು. ಒಂದು ಕಡೆ ಶರವೇಗದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹರಡುತ್ತಿದ್ದರೆ, ಮತ್ತೊಂದು ಕಡೆ ನಾನ್ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಅದರಲ್ಲೂ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಅಂದರೆ ಅದು ಇನ್ನಷ್ಟು ಸೂಕ್ಷ್ಮ ವಿಚಾರ. ಕೊರೊನಾ ಕಾಲದಲ್ಲಿ ಎರಡೆರಡು ಜೀವ ಉಳಿಸುವುದು ಸವಾಲಿನ ಕೆಲಸವಾಗಿತ್ತು. ಒಂದೆಡೆ ಕೊರೊನಾ ಸೋಂಕು ತಗುಲದಂತೆ ಎಚ್ಚರವಹಿಸುವುದು, ಮತ್ತೊಂದು ಸರಾಗವಾಗಿ ಹೆರಿಗೆ ಮಾಡಿಸುವುದು ಸುಲಭವಾಗಿರಲಿಲ್ಲ ಅಂತ ತಮ್ಮ ಅನುಭವವನ್ನು ವಾಣಿವಿಲಾಸ ಆಸ್ಪತ್ರೆಯ ವೈದ್ಯರು ಹಂಚಿಕೊಂಡಿದ್ದಾರೆ.
ಈ ವರ್ಷ ಕೊರೊನಾ ಪಿಡುಗು ಹೆಚ್ಚು ಬಾಧಿಸುತ್ತಿದ್ದು, ಇದನ್ನು ಯಾರೂ ಊಹೆ ಮಾಡಿರಲಿಲ್ಲ. ಇದಕ್ಕಾಗಿ ಯಾರೂ ತಯಾರಿ ಮಾಡಿಕೊಂಡೂ ಇರಲಿಲ್ಲ. ದಿಢೀರ್ ಅಂತ ಬಂದ ಕೊರೊನಾಗೆ ಮಾನಸಿಕವಾಗಿ, ದೈಹಿಕವಾಗಿ ಸಿದ್ಧವಾಗಿರಬೇಕಿತ್ತು. ಅದರಲ್ಲೂ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು, ಮಗುವಿಗೂ ಸೋಂಕು ತಗಲದಂತೆ ಎಚ್ಚರವಹಿಸುವುದು. ಈ ಸಮಯದಲ್ಲಿ ತಾಯಿ-ಮಗುವನ್ನ ದೂರ ಮಾಡಿ, ಮಗುವಿನ ರಕ್ಷಣೆ ಮಾಡುವುದು ಬಹಳ ಕಷ್ಟಕರವಾಗಿತ್ತು ಎಂದಿದ್ದಾರೆ.
ಕೊರೊನಾ ಭೀತಿ ನಡುವೆಯು ಎಲ್ಲರ ಬೆಂಬಲದೊಂದಿಗೆ ಜೀವ ಕೈಯಲ್ಲಿ ಇಟ್ಟುಕೊಂಡು ಮತ್ತೆರಡು ಜೀವ ಉಳಿಸಿದ್ದು ಸಂತಸ ತಂದಿದೆ. ಎಲ್ಲ ವಿಭಾಗದ ಮುಖ್ಯಸ್ಥರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಕೊರೊನಾ ಸೋಂಕಿತ ನೂರಕ್ಕೂ ಹೆಚ್ಚು ತಾಯಂದಿರಿಗೆ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯರ ಕೆಲ ಅನಿಸಿಕೆಗಳು ಹೀಗಿವೆ:
ಮೈಲಿಗಲ್ಲು ಸಾಧಿಸಿದ್ದು ಖುಷಿ ತಂದಿದೆ: ಡಾ.ರಾಧಿಕ
ವಿಕ್ಟೋರಿಯಾದ ಟ್ರೌಮಾ ಕೇರ್ ಬಿಲ್ಡಿಂಗ್ನಲ್ಲಿ ದಾಖಲಾಗಿರುವ ಕೊರೊನಾ ಪಾಸಿಟಿವ್ ತಾಯಂದಿರ ಆರೈಕೆ ಮಾಡುವ ಕೆಲಸ ನಮ್ಮದಾಗಿತ್ತು. ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಜವಾಬ್ದಾರಿ ವಹಿಸಿಕೊಂಡೆವು. ಹೊಸ ಮೈಲಿಗಲ್ಲು ಸೃಷ್ಟಿಯಾಗಿದ್ದು, 100ಕ್ಕೂ ಹೆಚ್ಚು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದೇವೆ. ಮಗುವಿಗೆ ಸೋಂಕು ತಗುಲದಂತೆ ನೋಡಿಕೊಂಡಿದ್ದು ಖುಷಿ ತಂದು ಕೊಟ್ಟಿದೆ ಎಂದರು ಡಾ. ರಾಧಿಕ.
ನಮ್ಮ ಬೆನ್ನೆಲುಬಾಗಿ ನಿಂತವರು ಸ್ನಾತಕೋತ್ತರ ವಿದ್ಯಾರ್ಥಿಗಳು: ಡಾ. ಅನಿತಾ
ಯಾವ ಮಗುವಿಗೂ ಸೋಂಕು ತಗುಲದಂತೆ ಎಚ್ಚರವಹಿಸಿ ಈ ಮೈಲಿಗಲ್ಲು ಸಾಧಿಸಲು ಮುಖ್ಯ ಬೆನ್ನೆಲುಬಾಗಿ ನಿಂತವರೇ ಸ್ನಾತಕೋತ್ತರ ವಿದ್ಯಾರ್ಥಿಗಳು. ಕೊರೊನಾಗೆ ಹೆದರದೇ ನಮ್ಮೊಟ್ಟಿಗೆ ನಿಂತು ಹೋರಾಟ ಮಾಡಿದ್ದಾರೆ. ವಿಭಾಗದ ಮುಖ್ಯಸ್ಥರಿಂದ ಹಿಡಿದು ನರ್ಸ್, ಡಿ ಗ್ರೂಪ್ ನೌಕರರವರೆಗೆ ಎಲ್ಲರ ಪಾತ್ರ ಬಹುದೊಡ್ಡದಾಗಿದೆ ಎಂದರು ಡಾ. ಅನಿತಾ.
ರೋಗ ಲಕ್ಷಣವಿಲ್ಲದ ಸೋಂಕಿತ ಗರ್ಭಿಣಿಯರೇ ಹೆಚ್ಚಿದ್ದರು: ಡಾ. ಶಶಿಕಲಾ
ಭಾಗಶಃ ಸೋಂಕಿತ ಗರ್ಭಿಣಿಯರು ಅಸಿಂಪ್ಟಮ್ಯಾಟಿಕ್ ಆಗಿದ್ದರು. ಅಂದರೆ ಕೋವಿಡ್ನ ಯಾವ ರೋಗಲಕ್ಷಣಗಳು ಇಲ್ಲದೇ ಇರುವವರಾಗಿದ್ದರು. ಹೆರಿಗೆಯ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿದಾಗಲೇ ಅವರಿಗೆ ಪಾಸಿಟಿವ್ ಇರುವುದು ಕಂಡು ಬಂದಿತ್ತು. ಇಂತಹ ಸಮಯದಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವುದು ಬಹಳ ದೊಡ್ಡ ಕೆಲಸವಾಗಿತ್ತು. ಕೊರೊನಾ ಬಗೆಗಿನ ಗೊಂದಲ ನಿವಾರಿಸಿ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಇನ್ನು, ಸುರಕ್ಷತೆಯ ದೃಷ್ಟಿಯಿಂದ ನಾವು ಧರಿಸುತ್ತಿದ್ದ ಪಿಪಿಇ ಕಿಟ್ನಿಂದ ಡಿಹೈಡ್ರೆಷನ್ ಆಗುತ್ತಿತ್ತು. ಆದರೂ ಇವೆಲ್ಲ ತೊಂದರೆಗಳ ನಡುವೆ ಜೀವ ಉಳಿಸುವ ಕೆಲಸ ಮಾಡಿದ್ದು, ಸಾರ್ಥಕ ಭಾವ ಇದೆ ಎಂದರು ಡಾ. ಶಶಿಕಲಾ.
ತಾಯಿ-ಮಗು ಜೀವ ಉಳಿಸಿರುವ ಹೆಮ್ಮೆ ಇದೆ: ಡಾ. ಅದಿತಿ
ಕೊರೊನಾ ಪಿಡುಗಿನ ಈ ಸಂದರ್ಭದಲ್ಲಿ ತಾಯಿ-ಮಗು ಜೀವ ಉಳಿಸಿದ್ದು ನಮಗೆಲ್ಲ ಹೆಮ್ಮೆ ಸಂಗತಿ ಎಂದು ಡಾ. ಅದಿತಿ ತಿಳಿಸಿದರು.
ಒಟ್ಟಾರೆ, ಕೋವಿಡ್ ವಿರುದ್ಧ ಹೋರಾಡುವುದರ ಜೊತೆಜೊತೆಗೆ ಜೀವಗಳ ಉಳಿಸುವ ಕೆಲಸದಲ್ಲಿ ಹಗಲು-ರಾತ್ರಿ ಕೆಲಸ ಮಾಡಿರುವ ಕೊರೊನಾ ವಾರಿಯರ್ಸ್ಗೆ ಸಲಾಂ ಹೇಳಲೇಬೇಕು.