ಬೆಂಗಳೂರು: ವಿಧಾನಪರಿಷತ್ನಲ್ಲಿ ಅಶಾಂತಿ ವಾತಾವರಣ ಮುಂದುವರಿದ ಹಿನ್ನೆಲೆ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾಗಿ ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ರಾಜ್ಯಪಾಲರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಘಟನಾವಳಿಗಳ ವಿವರವನ್ನು ರಾಜ್ಯಪಾಲರಿಗೆ ನೀಡಿರುವ ಅವರು, ಪರಿಷತ್ನಲ್ಲಿ ಮಂಗಳವಾರ ಭಯದ ವಾತಾವರಣ ಇತ್ತು. ನಾನು ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ - ಜಗ್ಗಾಟ ಮುಂದುವರೆದಿತ್ತು. ಜೊತೆಗೆ ಪೀಠದ ಸುತ್ತಲೂ ಸದಸ್ಯರು ಸುತ್ತುವರೆದು ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ನಾನು ಪೀಠದಿಂದ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದಾಗಿ ಹೇಳಿದ್ದಾರೆ.
ಓದಿ-ಜಾತಿ ಹೆಸರಲ್ಲಿ ನಿಗಮ -ಪ್ರಾಧಿಕಾರ ರಚನೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ವಿಧಾನ ಪರಿಷತ್ ಕಲಾಪ ಆರಂಭಿಸಲು ಕಾರ್ಯದರ್ಶಿಗಳ ಸೂಚನೆ ಮೇರೆಗೆ ಬೆಲ್ ಆರಂಭಿಸಲಾಯಿತು. ಆದರೆ, ಇದು ನಿಲ್ಲುವ ಮುನ್ನವೇ ಉಪಸಭಾಪತಿಗಳು ಸಭಾಪತಿ ಪೀಠ ಅಲಂಕರಿಸಿದ್ದರು. ನಾನು ನನ್ನ ಕಚೇರಿಯಲ್ಲಿ ಕುಳಿತಿರುವಾಗ ಎಲ್ಲ ಬೆಳವಣಿಗೆಗಳು ನಡೆದವು. ನಾನು ಕೂಡ ಬೇಕಿದ್ದ ಪೀಠದಲ್ಲಿ ಉಪಸಭಾಪತಿ ಕುಳಿತಿದ್ದರಿಂದ ಗೊಂದಲಕ್ಕೊಳಗಾದ ಸದಸ್ಯರು ಸಭಾಪತಿ ಪೀಠವನ್ನು ಸುತ್ತುವರೆದು, ತಳ್ಳಾಟ, ನೂಕಾಟ ಮಾಡಿದ್ದಾರೆ ಇದರಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಒಬ್ಬರಿಗೊಬ್ಬರು ಕಿರುಚಾಡುತ್ತ, ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯುತ್ತಿತ್ತು. ಕೆಲವು ಸದಸ್ಯರು ಪೀಠದ ಮುಂದಿನ ಗ್ಲಾಸ್, ಮೈಕ್‌ಗಳನ್ನು ಧ್ವಂಸಗೊಳಿಸುವ ಜೊತೆಗೆ ಪೀಠದ ಮುಂದೆ ಇದ್ದ, ಎಲ್ಲ ದಾಖಲೆಗಳನ್ನು ಹರಿದು ಹಾಕುತ್ತಿದ್ದರು ಎಂದು ವಿವರಿಸಿದ್ದಾರೆ.
ಓದಿ-ಮತದಾರರ ಪಟ್ಟಿ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿಸುವಂತೆ ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ
ಇನ್ನು ಕೆಲವು ಸದಸ್ಯರು ಸಭಾಪತಿ ಪ್ರವೇಶಿಸುವ ಕಚೇರಿಯ ಬಾಗಿಲನ್ನು ಒಳಗಡೆಯಿಂದ ಚಿಲಕ ಹಾಕಿಕೊಂಡು, ಸಭಾಪತಿಗಳು ಸದನದ ಒಳಗಡೆ ಬರದಂತೆ ತಡೆಯುವ ಪ್ರಯತ್ನಗಳನ್ನು ನಡೆಸಿದ್ದರು. ಈ ಎಲ್ಲ ಅಂಶಗಳನ್ನು ಕಚೇರಿಯಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಣೆ ಮಾಡಿದ್ದೇನೆ ಎಂದು ಸಭಾಪತಿ ರಾಜ್ಯಪಾಲರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.
ಉಪಸಭಾಪತಿ ಅವರನ್ನು ಕೆಲವು ಸದಸ್ಯರು ಬಲವಂತವಾಗಿ ಆ ಸ್ಥಾನದಿಂದ ಎಬ್ಬಿಸಿ ಕರೆದದ್ದನ್ನು ನಾನು ನೋಡಿದ್ದೇನೆ. ಗದ್ದಲ ಮುಂದುವರಿದಿರುವ ಸಂದರ್ಭದಲ್ಲೇ ವಿಧಾನಪರಿಷತ್ ಸಚಿವಾಲಯದ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ನನ್ನ ಕಚೇರಿಗೆ ಬಂದು ಸದನದೊಳಗಿನ ಪರಿಸ್ಥಿತಿಯನ್ನು ನನಗೆ ವಿವರಿಸಿದ್ದಾರೆ.
ಆ ಕೂಡಲೇ ಬೆಲ್ ಆಫ್ ಮಾಡುವಂತೆ ಕಾರ್ಯದರ್ಶಿಯವರಿಗೆ ಸೂಚಿಸಿ ದಂಡನಾಯಕರ ರಕ್ಷಣೆಯೊಂದಿಗೆ ಆಗಮಿಸಿದ್ದೇನೆ. ಅಲ್ಲಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.