ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು ಕಂಪ್ಲೀಟ್ ಅನ್ಲಾಕ್ ಮಾಡಲಾಗಿದೆ. ಇದರಿಂದ ಕಳೆದೆರಡು ತಿಂಗಳಿಂದ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಸೆಮಿ ಲಾಕ್, ಹಾಫ್ ಲಾಕ್, ಫುಲ್ ಲಾಕ್ಡೌನ್ ಅಂತ ಮನೆಯಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ, ಪ್ರತಿನಿತ್ಯ ಸಂಜೆ 5ರವರೆಗೆ ಮಾತ್ರ ಓಪನ್ ಇದ್ದ ಅಂಗಡಿಗಳು ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ವಹಿವಾಟು ನಡೆಸುತ್ತಿವೆ.
ಲಾಕ್ಡೌನ್ನಿಂದಾಗಿ ಗೃಹ ಬಂಧನದಲ್ಲಿದ್ದ ಜನರು ಅನ್ಲಾಕ್ ಆಗುತ್ತಲೇ ಶಾಪಿಂಗ್, ಈಟಿಂಗು ಅಂತಾ ಹೊರಗಡೆ ಹೊರಟಿದ್ದಾರೆ. ವೀಕೆಂಡ್ನಲ್ಲಿ ಮಾಲ್‌ಗಳಲ್ಲಿ ಸ್ವಚ್ಛಂದವಾಗಿ ಓಡಾಡಬಹುದು ಎಂಬ ಖುಷಿಯಾಗಿದ್ದಾರೆ. ಸರ್ಕಾರ ಅನುಮತಿ ಕೊಡುತ್ತಿದಂತೆ ಬೆಳಗ್ಗೆ 9 ಗಂಟೆಯಿಂದ ಶಾಪಿಂಗ್ ಮಾಲ್‌ಗಳಲ್ಲಿ ವ್ಯಾಪಾರವೂ ನಡೆಯುತ್ತಿದೆ. ಬೆಂಗಳೂರಿನ ಗರುಡಾ ಮಾಲ್, ಮಂತ್ರಿ ಮಾಲ್, ಓರಾಯನ್ ಮಾಲ್‌ಗಳು ಶಾಪಿಂಗ್ ಪ್ರಿಯರನ್ನು ಸ್ವಾಗತಿಸುತ್ತಿವೆ.
ಮಾರ್ಕೆಟ್ ನಿರ್ಬಂಧ ಮುಕ್ತ:
ಕೆ.ಆರ್.ಮಾರ್ಕೆಟ್ ಜನರಿಂದ ತುಂಬಿ ತುಳುಕುತ್ತಿದ್ದು, ಕೋವಿಡ್ ನಿಯಮಗಳು ಅಸ್ತಿತ್ವದಲ್ಲಿದ್ದರೂ ಜನರು ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.
ಯಶವಂತಪುರ, ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಮಾರ್ಕೆಟ್ನಲ್ಲಿ ಜನರ ದೊಡ್ಡ ಗುಂಪು ಕಂಡುಬಂತು. ರಸ್ತೆಬದಿ ವ್ಯಾಪಾರ ಕೂಡ ಬಲು ಜೋರಾಗಿದ್ದು, ನಿಯಮ ಮೀರಿ ಖರೀದಿಗೆ ಜನರು ಮುಂದಾಗಿದ್ದಾರೆ.
ಮಾಲ್ ಬೀಗ ಓಪನ್:
ಶಾಪಿಂಗ್ ಮಾಲ್‌ಗಳೂ ಇಂದಿನಿಂದ ಝಗಮಗಿಸುತ್ತಿವೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಮಾಲ್‌ಗಳು ಓಪನ್ ಆಗಿವೆ. ಕೋವಿಡ್ ನಿಯಮ ಪಾಲಿಸಿಕೊಂಡು ಶೇ 100ರಷ್ಟು ಸಿಬ್ಬಂದಿಯೊಂದಿಗೆ ಮಾಲ್‌ಗಳನ್ನು ಓಪನ್ ಮಾಡಲಾಗಿದೆ.
ಬಾರ್‌ನಲ್ಲಿ ಮತ್ತಿನ ಗಮ್ಮತ್ತು:
ಮದ್ಯಪ್ರಿಯರಿಗೆ ಇಂದಿನಿಂದ ಮತ್ತಷ್ಟು ಕಿಕ್ ಕೊಟ್ಟಿರುವ ಸರ್ಕಾರ, ಬಾರ್‌ಗಳಲ್ಲಿ ಸಿಟ್ಟಿಂಗ್ ವ್ಯವಸ್ಥೆಗೆ ಅನುಮತಿ ಕೊಟ್ಟಿದೆ. ಈವರೆಗೂ ಸಂಜೆ 5ಗಂಟೆವರೆಗೂ ಮಾತ್ರ ಬಾರ್‌ನಲ್ಲಿ ಮದ್ಯ ಪಾರ್ಸೆಲ್‌ಗೆ ಅವಕಾಶವಿತ್ತು. ಆದರೆ ಇಂದಿನಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಾರ್ ಓಪನ್ ಆಗಿವೆ.
ಬಸ್, ಮೆಟ್ರೋ ಸಂಪೂರ್ಣ ಕಾರ್ಯಾಚರಣೆ:
ಬಿಎಂಟಿಸಿ ಬಸ್ಸುಗಳು ಸಂಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿವೆ. ಸರ್ಕಾರಿ ಕಚೇರಿ ಸೇರಿದಂತೆ ಎಲ್ಲೆಡೆ ಶೇ. 100 ರಷ್ಟು ಅವಕಾಶ ಕೊಟ್ಟಿರುವುದರಿಂದ ಬಸ್, ಮೆಟ್ರೋ ಸಂಚಾರಕ್ಕೂ ಅನುಮತಿ ಸಿಕ್ಕಿದೆ. ಆದ್ರೆ ಬೆಂಗಳೂರಿನಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ.
ಕೆಎಸ್ಆರ್ಟಿಸಿ, ಮೆಟ್ರೋ ಮತ್ತು ಖಾಸಗಿ ಬಸ್ಸುಗಳು ಮುಂಜಾನೆಯಿಂದಲೇ ಪೂರ್ಣ ಕಾರ್ಯಾಚರಣೆಗಿಳಿದಿವೆ. ಅನ್ಲಾಕ್ 2.0 ನಲ್ಲಿ ಬಿಎಂಟಿಸಿ 3000 ಸಾವಿರ ಬಸ್ಗಳು ರಸ್ತೆಗಿಳಿದಿದ್ದವು. ಇಂದಿನಿಂದ 5000 ಬಿಎಂಟಿಸಿ ಬಸ್ ಗಳು, 4000 ಕೆಎಸ್ಆರ್ಟಿಸಿ ಬಸ್ ಗಳು ಕಾರ್ಯಾಚರಣೆಗಿಳಿದಿವೆ. ಪ್ರಯಾಣಿಕರು ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಬಸ್ನಲ್ಲಿ ನಿಂತುಕೊಂಡು ಪ್ರಯಾಣ ಮಾಡಲು ಅವಕಾಶ ಇಲ್ಲ. ಜೊತೆಗೆ ಕೋವಿಡ್ ರೂಲ್ಸ್ ಪಾಲನೆ ಮಾಡದ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ. ಜನ ಸಂಚಾರ ಎಂದಿನಂತೆ ಇಲ್ಲ. ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಓಡಾಟ ನಡೆಸುತ್ತಿದ್ದಾರೆ. ನೈಟ್ ಕರ್ಫ್ಯೂ ಹಿನ್ನಲೆ ರಾತ್ರಿ ಪಾಳಿಯ ಬಸ್ ಓಡಾಟವಿಲ್ಲ.
ಕೆಎಸ್ಆರ್ಟಿಸಿ ರಾತ್ರಿ ಸಂಚಾರಕ್ಕಿಲ್ಲ ಅಡ್ಡಿ:
ಇಂದಿನಿಂದ 3500 ರಿಂದ 4000 ಬಸ್ ಗಳು ಕಾರ್ಯಾಚರಣೆ ಮಾಡಲಿವೆ. ರಾಜ್ಯದ ಎಲ್ಲಾ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡಿರುವ ಹಿನ್ನಲೆ, ಪ್ರಯಾಣಿಕರ ಸಂಖ್ಯೆ ಕ್ರಮೇಣ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಮೇಲೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ ಯಾವುದೇ ಸಮಯದ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲೂ ಬಸ್ಗಳು ಕಾರ್ಯಾಚರಣೆ ಮಾಡಲಿವೆ.
ಇಂದಿನಿಂದ ವಾರದ ಎಲ್ಲಾ ದಿನವೂ ಮೆಟ್ರೋ ಸಂಚಾರ:
ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮೆಟ್ರೋ ಸಂಚಾರ ಇಂದಿನಿಂದ ಆರಂಭವಾಗಿದೆ. ಸೋಮವಾರ ದಿಂದ ಶುಕ್ರವಾರದ ವರೆಗೆ ಗರಿಷ್ಠ ಸಮಯದಲ್ಲಿ 5 ನಿಮಿಷದಿಂದ, ಗರಿಷ್ಠ ವಲ್ಲದ ಸಮಯದಲ್ಲಿ 15 ನಿಮಿಷ ಅಂತರದಲ್ಲಿ ಮೆಟ್ರೋ ಸೇವೆ ಆರಂಭವಾಗಿದೆ. ಶನಿವಾರ ಭಾನುವಾರ ಪ್ರಯಾಣಿಕರ ದಟ್ಟನೆಗೆ ಅನುಗುಣವಾಗಿ ಮೆಟ್ರೋ ಓಡಾಟ ನಡೆಸಲಿದೆ. ಅನ್ಲಾಕ್ 2.0 ನಲ್ಲಿ 50 ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಇಂದಿನಿಂದ 100% ಪ್ರಯಾಣಿಕರಿಗೆ ಅವಕಾಶ ನೀಡಿದೆ.
ಇಂದಿನಿಂದ ಪೂರ್ಣ ಪ್ರಯಾಣದಲ್ಲಿ ಕಂಪನಿ, ಕಾರ್ಖಾನೆ, ಸರ್ಕಾರಿ ಕಚೇರಿಗಳು ಆರಂಭವಾಗುವ ಹಿನ್ನೆಲೆಯಲ್ಲಿ, ಜನ ಸಂಚಾರ ಹೆಚ್ಚಾಗುವ ನಿರೀಕ್ಷೆ ಇದೆ. ಜೊತೆಗೆ ಬಸ್ ನಿಲ್ದಾಣದ ಆವರಣದಲ್ಲೇ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ.
ಉಳಿದಂತೆ ಏನೇನಿವೆ?:
ಹೋಟೆಲ್‌ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ರಾತ್ರಿ 9 ಗಂಟೆವರೆಗೂ ಓಪನ್ ಮಾಡಿ ವ್ಯಾಪಾರ ವಹಿವಾಟು ನೆಡೆಸುತ್ತಿವೆ. ಇನ್ನು ಶೇಕಡಾ100ರಷ್ಟು ಸಿಬ್ಬಂದಿ ಬಳಸಿ ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ಮದುವೆ ಸಮಾರಂಭಕ್ಕೆ ಇಷ್ಟು ದಿನ 40 ಜನರಿಗಷ್ಟೇ ಅವಕಾಶ ಇತ್ತು. ಆದರೆ ಇಂದಿನಿಂದ ಮದುವೆಗಳಲ್ಲಿ 100 ಜನ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಜನರಿಗೆ ಭಾಗವಹಿಸಲು ಪರ್ಮಿಷನ್ ಇದೆ. ಇನ್ನು ಈಜುಕೊಳ ಓಪನ್ ಮಾಡಲಾಗಿದ್ದು ಕ್ರೀಡಾಪಟುಗಳಿಗೆ ಮಾತ್ರ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಜೊತೆಗೆ ಕ್ರೀಡಾ ಸಂಕೀರ್ಣಗಳು ತೆರೆದಿದ್ದು, ಅಲ್ಲಿಯೂ ಕ್ರೀಡಾಪಟುಗಳು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಗುಡ್ ಬೈ:
ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್ ಎನ್ನುವ ಆತಂಕ ವೀಕೆಂಡ್ ಮಸ್ತಿ ಪ್ರಿಯರಿಗೆ ಇತ್ತು. ಅಂತವರಿಗೆ ಸರ್ಕಾರ ರಿಲೀಫ್ ಕೊಟ್ಟಿದೆ, ಈ ವಾರದಿಂದಲೇ ವೀಕೆಂಡ್ ಕರ್ಫ್ಯೂ ಇರುವುದಿಲ್ಲ. ಆದರೆ ನೈಟ್ ಕರ್ಫ್ಯೂ ಇರಲಿದ್ದು, ನೈಟ್ ಕರ್ಫ್ಯೂ ಅವಧಿಯನ್ನ ಕಡಿಮೆ ಮಾಡಲಾಗಿದೆ. ಅಂದರೆ ಇಂದಿನಿಂದ ಸಂಜೆ 7ರ ಬದಲಿಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ.
ದೇಗುಲ ಓಪನ್, ಭಕ್ತರಿಗೆ ದೇವರ ದರ್ಶನ:
ಮಂದಿರ, ಚರ್ಚ್ ಮಸೀದಿಗಳಿಗೆ ತೆರಳಲಾಗದೆ ಮನಸ್ಸಿನಲ್ಲೇ ಪ್ರಾರ್ಥನೆ ಮಾಡುತ್ತಿದ್ದ ಭಕ್ತರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹೀಗಾಗಿ ರಾಜ್ಯದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಇಂದಿನಿಂದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಬನಶಂಕರಿ, ಕಾಡು ಮಲ್ಲೇಶ್ವರ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನ ಜನರು ಪಡೆಯುತ್ತಿದ್ದಾರೆ.