ಬೆಂಗಳೂರು : ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಬೇಕಿದ್ದ ಪಕ್ಷದ ಕೋರ್ ಕಮಿಟಿ ಸಭೆ ಕಚೇರಿಯಿಂದ ಖಾಸಗಿ ಹೋಟೆಲ್ಗೆ ಸ್ಥಳಾಂತರಗೊಂಡಿದೆ. ಎಸ್ಪಿಜಿ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದ ನಂತರ ಕೊನೆ ಕ್ಷಣದಲ್ಲಿ ಸ್ಥಳ ಬದಲಾವಣೆ ಮಾಡಲಾಗಿದೆ.
ಇಂದು ರಾತ್ರಿ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ರೇಸ್ ಕೋರ್ಸ್ ರಸ್ತೆಯ ಖಾಸಗಿ ತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಖಾಸಗಿ ಹೋಟೆಲ್‌ನಲ್ಲಿ ಅವರು ಸಭೆ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ನಲ್ಲಿ ಭೋಜನ ಮಾಡಲಿರುವ ಅಮಿತ್ ಶಾ, ನಂತರ ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ.
ಈ ಮೊದಲು ನಿಗದಿಯಾಗಿದ್ದ ಸಭೆಯನ್ನು ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಿಂದ ಖಾಸಗಿ ಹೋಟೆಲ್ಗೆ ಶಿಫ್ಟ್ ಮಾಡಲಾಗಿದೆ. ಸಿಎಂ ಅಧಿಕೃತ ನಿವಾಸದ ಪಕ್ಕದಲ್ಲೇ ಇರುವ ತಾರಾ ಹೋಟೆಲ್‌ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡುವ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಸಭೆಯನ್ನು ಹೋಟೆಲ್ಗೆ ಸ್ಥಳಾಂತರ ಮಾಡಲಾಗಿದೆ ಎನ್ನಲಾಗುತ್ತಿದೆ.
2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ಭಾಗವಾಗಿ ಸಭೆ ನಡೆಯಲಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗ್ರಾಮಗಳಿಗೆ ಸಹಕಾರಿ ಆಂದೋಲನ ಕೊಂಡೊಯ್ಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಅಮಿತ್ ಶಾ