ಬೆಂಗಳೂರು: ಅನುದಾನ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸಂಸದರ ನಿಯೋಗವು ಸಂಸತ್ ಭವನದ ಕಚೇರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಒಳಗೊಂಡ ರಾಜ್ಯ ಸಂಸದರ ನಿಯೋಗವು, 15ನೇ ಹಣಕಾಸು ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ ಅನುದಾನದ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಹಾಗೆಯೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದೆ.
ಹಣಕಾಸು ಸಚಿವೆ ಭೇಟಿ ನಂತರ ಮಾತನಾಡಿದ ಸದಾನಂದಗೌಡ, ರಾಜ್ಯದ ಪರವಾಗಿ ನಮ್ಮ ಬೇಡಿಕೆ ತಿಳಿಸಿದ್ದೇವೆ. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯಕ್ಕೆ ಅನುಕೂಲಕರವಾದ ಅನುದಾನದ ಹಂಚಿಕೆ ನಿರೀಕ್ಷಿಸಲಾಗಿದೆ ಎಂದರು.
ನಿಯೋಗದಲ್ಲಿ ಕೇಂದ್ರ ಸಚಿವರ ಹೊರತಾಗಿ ಸಂಸದರಾದ ಪಿ.ಸಿ.ಮೋಹನ್, ಜಿ.ಎಸ್.ಬಸವರಾಜು, ಕರಡಿ ಸಂಗಣ್ಣ, ದೇವೇಂದ್ರಪ್ಪ, ಅಣ್ಣಾ ಸಾಹೇಬ್ ಜೊಲ್ಲೆ ಇದ್ದರು.