ಬೆಂಗಳೂರು : ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ ಜನವರಿ 6ರಂದು ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಮೌರ್ಯ ಸರ್ಕಲ್ನಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಲಿದ್ದಾರೆ.
ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಸಂಸ್ಥೆಯ ಸದಸ್ಯರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಇದುವರೆಗೂ ಬೇಡಿಕೆಗಳ ಬಗೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜನವರಿ 6ರಂದು ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದರು.
ಬೇಡಿಕೆಗಳು ಏನೇನು?: ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಶಾಲೆ ಆರಂಭಗೊಂಡಿದ್ದು, ತಕ್ಷಣ ಶೈಕ್ಷಣಿಕ ಕ್ಯಾಲೆಂಡರ್ ಹಾಗೂ ಪಠ್ಯವಸ್ತುವನ್ನು ನಿಗದಿಗೊಳಿಸಿ ಬಿಡುಗಡೆಗೊಳಿಸಬೇಕು. 2020ರ 11 RTE ಮರುಪಾವತಿಯನ್ನು ಒಂದೇ ಕಂತಿನಲ್ಲಿ ಜನವರಿ 20ರೊಳಗೆ ಬಿಡುಗಡೆಗೊಳಿಸಬೇಕು.
ಪ್ರಸ್ತುತ ವರ್ಷದ ರಾಜ್ಯ ಸರ್ಕಾರ ತನ್ನ ಅಧೀನದಲ್ಲಿರುವ ಶಾಲಾ ಮಕ್ಕಳಿಗೆ ಖರ್ಚು ಮಾಡುವ ತಲಾವಾರು ವೆಚ್ಚವನ್ನೇ ಖಾಸಗಿ ಶಾಲಾ RTE ಮಕ್ಕಳಿಗೆ ಕೊಡಬೇಕು ಹಾಗೂ ಖಾಸಗಿ ಶಾಲಾ ಖರ್ಚು ವೆಚ್ಚದ ಆಡಿಟ್ ರಿಪೋರ್ಟ್ ಪರಿಗಣಿಸುವಂತಿಲ್ಲ.
ಎಲ್ಲಾ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದ ಅನುದಾನಕ್ಕೊಳಪಡಿಸಬೇಕು. ಬೀದರ್ ಜಿಲ್ಲೆಯ 124 ಶಾಲೆಗಳನ್ನು ಮುಚ್ಚುವ ಆದೇಶ ಹಿಂಪಡೆಯಬೇಕು. ಕಳೆದ 9 ತಿಂಗಳಿಂದ ಖಾಸಗಿ ಶಾಲಾ ನೌಕರರು ಸಂಬಳವಿಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ಅಡಿ ತಿಂಗಳಿಗೆ ಕನಿಷ್ಟ ₹10,000 ನಂತೆ 9 ತಿಂಗಳ ಪ್ಯಾಕೇಜ್ ನೀಡಬೇಕು.
ಖಾಸಗಿ ಶಾಲೆಗಳ ಅಭಿವೃದ್ಧಿಗೆ ತಮಿಳುನಾಡು ಮಾದರಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಖಾಸಗಿ ಶಾಲೆಗಳು ತೆಗೆದುಕೊಂಡಿರುವ ಕಟ್ಟಡ ನಿರ್ಮಾಣ ಹಾಗೂ ವಾಹನ ಸಾಲ ಮರುಪಾವತಿ ಕುರಿತಂತೆ ಬ್ಯಾಂಕ್ EMI ಪಾವತಿಸಲು ಕನಿಷ್ಟ ಒಂದು ವರ್ಷ ಕಾಲಾವಕಾಶ ನೀಡುವಂತೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.