ಬೆಂಗಳೂರು: ನಿನ್ನೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಉಮೇಶ್ ಕತ್ತಿ ಅವರು ಇಂದು ವಿಧಾನಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದರು.
ಸಂಕ್ರಾತಿ ಹಬ್ಬದ ಶುಭದಿನವಾದ ಇಂದು ವಿಧಾನಸೌಧದ 329, 329 ಎ ಕೊಠಡಿಗಳಿಗೆ ಸಚಿವರು ಪೂಜೆ ಮಾಡಿ ಪ್ರವೇಶಿಸಿದರು. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಅವರ ಕುಟುಂಬದವರು, ಸಂಬಂಧಿಕರು, ಆತ್ಮೀಯರು ಶುಭ ಕೋರಿದರು.
ಕಚೇರಿ ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನೂತನ ಸಚಿವ ಉಮೇಶ್ ಕತ್ತಿ ಅವರು, ಯಾವ ಇಲಾಖೆ ಎಂಬುದು ಇನ್ನೂ ನಿಗದಿಯಾಗಿಲ್ಲ. ನನಗೆ ಖಾತೆ ವಹಿಸಿದ ನಂತರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಈ ಹಿಂದೆಯೂ ಸಕ್ಕರೆ, ಲೋಕೋಪಯೋಗಿ, ಬಂಧಿಖಾನೆ ಸೇರಿದಂತೆ ಹಲವು ಇಲಾಖೆಗಳ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳು ಯಾವ ಖಾತೆ ಕೊಟ್ಟರೂ ಕೆಲಸ ಮಾಡ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ 224 ಜನ ಶಾಸಕರೂ ಮಂತ್ರಿಯಾಗಲಿದ್ದಾರೆ. ನಾನೇ ಒಂದು ವರ್ಷ ಕಾದಿದ್ದೇನೆ. ಈಗ ಮಂತ್ರಿ ಆಗಿದ್ದೇನೆ ಎಂದ ಕತ್ತಿ, ಹೆಚ್. ವಿಶ್ವನಾಥ್, ಮುನಿರತ್ನರಿಗೆ ಕೋರ್ಟ್ ವಿಚಾರ ಇದೆ. ಆದು ಕ್ಲೀಯರ್ ಆದ ಬಳಿಕ ಅವರೂ ಸಚಿವರಾಗಲಿದ್ದಾರೆ ಎಂದರು.
ಇನ್ನು ಬ್ಲಾಕ್ ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕತ್ತಿ, ಇಂದು ಮಕರ ಸಂಕ್ರಮಣ, ಒಳ್ಳೆಯ ಯೋಚನೆ ಮಾಡಿ, ಒಳ್ಳೆಯ ಕೆಲಸ ಮಾಡಿ, ಎಲ್ಲರ ಕುಟುಂಬಕ್ಕೂ ಒಳಿತಾಗಲಿ ಎಂದು ಶುಭ ಹಾರೈಸಿದರು.