ಬೆಂಗಳೂರು: ಜೈಲಿನಲ್ಲಿ ಸಹಕೈದಿಯೋರ್ವನಿಂದ ಪ್ರೇರಿತಗೊಂಡು ಸೇಫ್ಟಿ ಪಿನ್ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ರೂಪೇನ ಅಗ್ರಹಾರ ನಿವಾಸಿಗಳಾದ ಕಿಶೋರ್ ಹಾಗೂ ಪ್ರವೀಣ್ ಬಂಧಿತರು. ಬೈಕ್ ಕದಿಯುವುದೇ ಕಾಯಕ ಮಾಡಿಕೊಂಡಿದ್ದ ಕಿಶೋರ್ ಕಳೆದ ಒಂದೆರಡು ವರ್ಷಗಳಿಂದ ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ.
ಈತ ಜೈಲಿನಲ್ಲಿ ಸಹ ಕೈದಿಯಿಂದ ಬೈಕ್ ಹೇಗೆ ಕದಿಯಬೇಕು ಎಂದು ತಿಳಿದುಕೊಂಡಿದ್ದ. ಕಾರಾಗೃಹದಿಂದ ಹೊರಗೆ ಬರುತ್ತಿದ್ದಂತೆ ಸಹಚರ ಪ್ರವೀಣ್ ಜತೆ ಸೇರಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್ ಮುರಿದು, ಸೇಫ್ಟಿ ಪಿನ್ ಬಳಸಿ ಸುಲಭವಾಗಿ ಕಳ್ಳತನ ಮಾಡುತ್ತಿದ್ದರು.
ಆರೋಪಿಗಳ ಬಂಧನದಿಂದ ಕೆ.ಜಿ.ಹಳ್ಳಿ, ಹೈಗ್ರೌಂಡ್ಸ್ , ಬಾಣಸವಾಡಿ, ಕೆಂಗೇರಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 18ಕ್ಕೂ ಹೆಚ್ಚು ಪ್ರಕರಣಗಳನ್ನ ಭೇದಿಸಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಕೃತ್ಯ: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಹೊತ್ತು ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ, ವಿಕ್ರಮ್, ಸಲೀಂ ಹಾಗೂ ಬಸಪ್ಪ ಬಂಧಿತ ಆರೋಪಿಗಳು.
ಇವರು ಫೆಬ್ರವರಿ 6 ರಂದು ಜಂಬೂ ಸವಾರಿ ದಿಣ್ಣೆಯಿಂದ ಗೊಟ್ಟಿಗೆರೆಗೆ ಹೋಗುವ ಮಾರ್ಗದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದರು. ಬೀಟ್ ನಲ್ಲಿದ್ದ ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿಗಳು ಬೈಕ್ ಕಳ್ಳತನದ ವಿಷಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬೈಕ್ ಎಗರಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಒಂದು ವೇಳೆ ಬೈಕ್ ಕಳ್ಳತನ ಮಾಡೋದು ಕಷ್ಟ ಎನಿಸಿದರೆ, ದರೋಡೆಗೆ ಯತ್ನಿಸುತ್ತಿದ್ದರು. ಪ್ರಕರಣದ ಐದನೇ ಆರೋಪಿ ಜಗದೀಶ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಈವರಗೆ 20 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಶ್ಲೀಲವಾಗಿ ಫೋಟೋ ಎಡಿಟ್ ಮಾಡಿ ಪೋಸ್ಟ್: ಬೆಂಗಳೂರಿನಲ್ಲಿ ಮೂವರು ಅರೆಸ್ಟ್