ಬೆಂಗಳೂರು : ಕಾರು ಕಳುವಾದ 24 ಗಂಟೆಯೊಳಗೆ ಕಳ್ಳರ ಸಮೇತ ಕಾರನ್ನು ಪತ್ತೆ ಹಚ್ಚಲಾಗಿದೆ. ಕಾರಿನ ಜಿಪಿಎಸ್ ಲೊಕೇಶನ್ ಆಧರಿಸಿ ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿ ತಿಳಿಸಿದ್ದಾರೆ. ಆಶಿಕ್, ಅಬ್ದುಲ್ಲಾ ಎಂಬುವರು ಬಂಧಿತ ಆರೋಪಿಗಳು. ಬಂಧಿತರು ಸ್ನೇಹಿತ ಖಾಸಿಫ್ ಮೋಹಿನ್ ಖಾನ್ ಕಾರನ್ನು ಕದ್ದು ಪರಾರಿ ಆಗಿದ್ದರು. ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಖಾಸಿಫ್ ಮೋಹಿನ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 3ರಂದು ಖಾಸಿಫ್ ಕ್ರೆಟಾ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಬಂಡೇಪಾಳ್ಯ ಬಳಿಯ ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರನ್ನು ಪಾರ್ಕ್ ಮಾಡಿದ್ದರು.

ಈ ವೇಳೆ ಖಾಸಿಫ್ ಕಾರಿನ ಕೀ ಕಳೆದುಕೊಂಡಿದ್ದರು. ಕೇರಳದಿಂದ ಮತ್ತೊಂದು ಕೀ ತರಿಸಲು ಖಾಸಿಫ್ ತಯಾರಾಗಿದ್ದರು. ಆದರೆ, ನಿಲ್ಲಿಸಿದ್ದ ಕಾರು ಏಪ್ರಿಲ್ 6ರಂದು ಕಳ್ಳತನವಾಗಿತ್ತು.

ದೂರಿನ ಆಧಾರದಲ್ಲಿ ಪ್ರಕರಣ ಬೆನ್ನತ್ತಿದ ಪೊಲೀಸ್ ಸಿಬ್ಬಂದಿಗೆ ಕಾರಿನ ಜಿಪಿಎಸ್ ಮೂಲಕ ವಾಹನ ಕೇರಳದಲ್ಲಿರುವ ಮಾಹಿತಿ ದೊರೆತಿದೆ. ಪ್ರಕರಣ ದಾಖಲಾದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಶ್ರೀನಾಥ್ ಮಹಾದೇವ್ ಜೋಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹುಕ್ಕಾ ಸೇವನೆಗೆ ಪ್ರತ್ಯೇಕ ಸ್ಮೋಕಿಂಗ್ ಝೋನ್ ವ್ಯವಸ್ಥೆ ಮಾಡ್ಬೇಕು : ಪಬ್ ಮಾಲೀಕರಿಗೆ ಹೈಕೋರ್ಟ್ ನಿರ್ದೇಶನ