ಬೆಂಗಳೂರು: ಲಾಕ್ಡೌನ್ ನಡುವೆಯೂ ಮೊಬೈಲ್ ಮೂಲಕ ಹುಡುಗಿಯರ ಫೋಟೊ ಕಳುಹಿಸಿ ಗಿರಾಕಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾರತ್ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಹೊರ ರಾಜ್ಯಗಳ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಆರೋಪಿಗಳು ನಗರಕ್ಕೆ ಕರೆ ತಂದು ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದರು. ರಂಗಸ್ವಾಮಿ ಹಾಗೂ ಶಿವಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ದಂಧೆಯಲ್ಲಿ ಮಹಿಳೆಯೊಬ್ಬರು ಭಾಗಿಯಾಗಿ ಸದ್ಯ ತಲೆಮರೆಸಿಕೊಂಡಿದ್ದಾಳೆ ಎನ್ನಲಾಗಿದೆ. ಆರೋಪಿಗಳ ಬಂಧನದಿಂದ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ನಾಲ್ವರು ಮಹಿಳೆಯರನ್ನು ಸಿಸಿಬಿ ಮಹಿಳಾ ಘಟಕದ ಎಸಿಪಿ ಎಂ.ಆರ್.ಮುದವಿ ನೇತೃತ್ವದ ತಂಡ ರಕ್ಷಿಸಿದೆ.
ಮನೆಯೊಂದರಲ್ಲಿ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿ ಅಡ್ಡೆ ಮೇಲೆ ಸಿಸಿಬಿ ದಾಳಿ ಮಾಡಿದೆ. ಈ ವೇಳೆ ಇಬ್ಬರು ಆರೋಪಿಗಳ ಜೊತೆ ಗಿರಾಕಿಯಾಗಿ ಬಂದಿದ್ದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಹೊರ ರಾಜ್ಯಗಳ ಮಹಿಳೆಯರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಆರೋಪಿಗಳು ನಗರಕ್ಕೆ ಕರೆ ತಂದು ವೇಶ್ಯಾವಾಟಿಕೆ ಜಾಲಕ್ಕೆ ನೂಕುತ್ತಿದ್ದರಂತೆ. ಗಿರಾಕಿಗಳೊಂದಿಗೆ ಸಹಕರಿಸಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂದು ಆಮಿಷವೊಡ್ಡುತ್ತಿದ್ದರಂತೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಯುವತಿಯರ ಫೋಟೊಗಳನ್ನು ಮೊಬೈಲ್ ಮೂಲಕ ಗಿರಾಕಿಗಳಿಗೆ ಕಳುಹಿಸಿ ಡೀಲ್ ಕುದುರಿಸಿ ನಂತರ ಬರಮಾಡಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ ವಿವಿಧ ಕಂಪನಿಯ ಮೂರು ಮೊಬೈಲ್ಗಳು, 2,910 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.