ಬೆಂಗಳೂರು: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಾಪಸ್ ಪಡೆಯುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.
ಪದವಿ ಕೋರ್ಸ್‌ಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕರ ಸಂಘ, ಶ್ರೀಹಯಗ್ರೀವ ಟ್ರಸ್ಟ್, ವ್ಯೋಮ ಲಿಂಗ್ವೆಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿರುವುದು ಸರಿಯಲ್ಲ.
ಕನ್ನಡಿಗರು ಕಟ್ಟುವ ತೆರಿಗೆ ಹಣದಿಂದಲೇ ಸರ್ಕಾರ ಮಾಗಡಿಯಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ 100 ಎಕರೆ ಭೂಮಿ ಮತ್ತು 356 ಕೋಟಿ ರೂ.ಅನುದಾನ ನೀಡಿದೆ ಎಂಬುದನ್ನು ಮರೆಯಬಾರದು ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಜನರೊಂದಿಗೆ ಸಂವಹನ ನಡೆಸಲು ಕನ್ನಡ ಅಗತ್ಯವೇ ಹೊರತು ಸಂಸ್ಕೃತವಲ್ಲ ಎಂಬುದನ್ನು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ಸಂಸ್ಕೃತ ಭಾರತ ಟ್ರಸ್ಟ್ ಮತ್ತು ಉಳಿದವರು ಅರಿತುಕೊಳ್ಳಬೇಕು. ಕನ್ನಡ ನಾಡಿನಲ್ಲಿ ಸಂಸ್ಕೃತ ಕಲಿತರೆ ಅಥವಾ ಕಲಿಯದಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಕನ್ನಡ ಕಲಿಯದಿದ್ದರೆ ಇಲ್ಲಿನ ಜನರೊಂದಿಗೆ ಬೆರೆತು ಬದುಕು ಕಟ್ಟಿಕೊಳ್ಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಜ್ಞಾನವನ್ನು ಪಡೆಯುವುದು ಅವಶ್ಯಕ ಎಂಬ ಸಾಮಾನ್ಯ ತಿಳುವಳಿಕೆಯನ್ನು ಅಳವಡಿಸಿಕೊಳ್ಳದ, ನಮ್ಮ ಶಿಕ್ಷಣ ವ್ಯವಸ್ಥೆ ನಾಡಿನ ಜನ ಭಾಷೆಯ ಮಹತ್ವವನ್ನು ಅರಿತಿಲ್ಲ. ಈ ಹಿಂದೆ ಮಾಡಿದ್ದ ಉದಾರ ನೀತಿಯಿಂದಾಗಿ ಪರೋಕ್ಷವಾಗಿ ಆಧುನಿಕತೆ ಮತ್ತು ಕಾರ್ಪೊರೇಟ್ ಶಿಕ್ಷಣ ವ್ಯವಸ್ಥೆಯಿಂದ ಜನಭಾಷೆಯಾದ ಕನ್ನಡದ ಸ್ಥಾನಮಾನ ಏರುಪೇರಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯವಾಗಿ ಬೋಧಿಸಲು ಸರ್ಕಾರ ಕ್ರಮ ವಹಿಸಬೇಕು. ಕೂಡಲೇ ಸಂಸ್ಕೃತ ಭಾರತ ಟ್ರಸ್ಟ್ ಸೇರಿದಂತೆ ಇತರ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್ ಪಡೆಯಬೇಕು. ಕನ್ನಡ ಕಲಿಕೆಗೆ ಅಡ್ಡಿಪಡಿಸಬಾರದು ಎಂದು ಟಿ.ಎಸ್.ನಾಗಾಭರಣ ಆಗ್ರಹಿಸಿದರು.
ಇದನ್ನೂ ಓದಿ: ಪವಿತ್ರ ಗಂಗಾನದಿಯಲ್ಲಿ ಮಿಂದೇಳುತ್ತಿರುವ ಭಕ್ತರು: ಪೊಂಗಲ್ ಆಚರಿಸಿದ ಪುದುಚೇರಿ ಲೆಫ್ಟಿನೆಂಟ್ ಗವರ್ನರ್