ಬೆಂಗಳೂರು: ಇಂದಿನಿಂದ ಸಾರಿಗೆ ನೌಕರರು ಸರ್ಕಾರದ ವಿರುದ್ದ ವಿನೂತನ ಪ್ರತಿಭಟನೆ ಮುಂದಾಗಿದ್ದು, ಮೆಜೆಸ್ಟಿಕ್ನಲ್ಲಿ ನಾಲ್ಕು ನಿಗಮದ ನೌಕರರು ತಮ್ಮ ಕೈಗಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ತಮ್ಮ 9 ಬೇಡಿಕೆಗಳನ್ನ ಈಡೇರಿಸುವಂತೆ ಇಂದಿನಿಂದ ಏಪ್ರಿಲ್ 7ನೇ ತಾರೀಖಿನವರೆಗೆ ವಿನೂತನ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೈಗಳಿಗೆ ಕಪ್ಪುಪಟ್ಟಿ ಧರಿಸುವುದರ ಜೊತೆಗೆ 'ನಮ್ಮ ಹೋರಾಟ ನ್ಯಾಯಯುತವಾದ ಬೇಡಿಕೆಗಾಗಿ' ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಕಪ್ಪು ಪಟ್ಟಿ ಪ್ರದರ್ಶನ, ಏಪ್ರಿಲ್ 2ರಂದು ಬೆಂಗಳೂರಿನ ಸರ್ಕಲ್ಗಳಲ್ಲಿ ಕುಟುಂಬದವರೊಂದಿಗೆ ಸೇರಿಕೊಂಡು ಬಜ್ಜಿ - ಬೊಂಡಾ ಮಾರಾಟ, ಏ 3ರಂದು ನೌಕರರ ಕುಟುಂಬದವರೊಂದಿಗೆ ನಗರಗಳ ಸರ್ಕಲ್ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ, ಏ. 4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಏ. 5ರಂದು ಧರಣಿ ಸತ್ಯಾಗ್ರಹ, ಏ. 5ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ, ಏ. 7ರಂದು ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತಗೊಳಿಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಓದಿ: ಇಂದಿನಿಂದ 5,500 ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಸಚಿವ ಸುಧಾಕರ್