ಬೆಂಗಳೂರು : ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ. ನಾಳೆ ಸರ್ಕಾರದ ಗಮನ ಸೆಳೆಯಲು ಸಂಜೆ 6 ರಿಂದ 7ರವರೆಗೆ ದೀಪ ಬೆಳಗುವ ಮೂಲಕ ಕರ್ನಾಟಕದಲ್ಲಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಇದೇ ವೇಳೆ ಮಾತಾನಾಡಿದ ಅವರು, ಸಾರಿಗೆ ನೌಕರರು ಇಂದು ಕೂಡ ಕೆಲಸಕ್ಕೆ ಹಾಜರಾಗದೇ ಸರ್ಕಾರದ ವಿರುದ್ಧ ಸಾರಿಗೆ ಸಂಗ್ರಾಮ ಮುಂದುವರೆಸಿದ್ದಾರೆ. ಆದರೂ ಯಡಿಯೂರಪ್ಪನವರು ನಮ್ಮನ್ನ ಕಡೆಗಣಿಸುತ್ತಿದ್ದಾರೆ. ಹಸಿದ ಹೊಟ್ಟೆ, ದುಡಿಯುವ ಜನಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಶಾಸಕರ ಮನೆ ಮುಂದೆಯೂ ಧರಣಿ : ಏಪ್ರಿಲ್ 16ರಂದು ಎಲ್ಲ ಶಾಸಕರನ್ನ ಭೇಟಿ ಮಾಡಿ, ಅವರ ಮನೆಯ ಮುಂದೆ ಹೋಗಿ ನಮ್ಮ ಬೇಡಿಕೆಯನ್ನ ಸಿಎಂ ಬಳಿ ಮಾತಾಡುವಂತೆ ಕೇಳಿಕೊಳ್ಳಲಿದ್ದೇವೆ. ಶಾಸಕರ ಮನೆ ಮುಂದೆಯೇ ಧರಣಿ ನಡೆಸಿ ಮನವಿ ನೀಡಲಿದ್ದೇವೆ ಎಂದರು.
ಯಡಿಯೂರಪ್ಪನವರ ಸಿಟ್ಟಿನ ಮಾತು : ಯಡಿಯೂರಪ್ಪನವರು ಸಾರಿಗೆ ನೌಕರರ ವಿಚಾರದಲ್ಲಿ ಸಿಟ್ಟಿನಿಂದ ಮಾತಾಡುತ್ತಿದ್ದಾರೆ. ನೀವೂ ನಮ್ಮ ಮುಖ್ಯಮಂತ್ರಿಗಳು, ಕೇವಲ ಅಧಿಕಾರಿ ವರ್ಗ ಹೇಳಿರೋ ಮಾತುಗಳನ್ನ ಆಲಿಸಿ, ನೀವೂ ಪ್ರತಿಕ್ರಿಯಿಸುತ್ತಿದ್ದೀರಾ.. ನಮ್ಮ ಸಾರಿಗೆ ನೌಕರರ ಮಾತುಗಳನ್ನ ಒಮ್ಮೆ ಆಲಿಸಿ, ನಮ್ಮ ಮೇಲೆ ಮೃದು ಧೋರಣೆ ತೋರಿಸಿ ಎಂದು ಮನವಿ ಮಾಡಿದರು.
ನಾವು ವೋಟರ್ಸ್-ಬಿಜೆಪಿಯವರು ಮರೆಯಬಾರದು : ಉಪ ಚುನಾವಣೆಯಲ್ಲಿ ಯಡಿಯೂರಪ್ಪನವರು ಮುಳುಗಿ ಹೋಗಿದ್ದಾರೆ. ಸಾರಿಗೆ ನೌಕರರು ಹಾಗೂ ಅವರ ಕುಟುಂಬದವರು ಸೇರಿದರೆ 6 ಲಕ್ಷಕ್ಕೂ ಹೆಚ್ಚು ವೋರ್ಟಸ್ ಇದ್ದೇವೆ, ಬಿಜೆಪಿಯವರು ಇದನ್ನ ಮರೆಯಬಾರದು. ನಾವು ನಾಗರಿಕರು ಎಂದು ಪರಿಗಣಿಸಿ ನಮ್ಮ ಮನವಿಗೆ ಸ್ಪಂದಿಸಿ. ನೌಕರರನ್ನ ವಜಾ ಮಾಡುವುದು, ನೋಟಿಸ್ ಕೊಡುವುದು ಸರಿಯಲ್ಲ ಎಂದರು.
ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸುತ್ತಿಲ್ಲ : ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡದೇ ಇರುವ ಕಾರಣಕ್ಕೆ ಡಿಪೋ ಮ್ಯಾನೇಜರ್ ಮೇಲೆ ಸಾಮೂಹಿಕ ಪೊಲೀಸ್ ದೂರು ನೀಡಲು ಯೋಜಿಸಲಾಗಿತ್ತು. ಆದರೆ, ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸುತ್ತಿಲ್ಲ. ಹೀಗಾಗಿ, ನಾಳೆಯಿಂದ ರಿಜಿಸ್ಟರ್ ಪೋಸ್ಟ್ ಮೂಲಕ ದೂರು ದಾಖಲು ಮಾಡುತ್ತೇವೆ, ನಂತರ ಹೈಕೋರ್ಟ್ಗೆ ಮನವಿ ಮಾಡಲಾಗುವುದು ಎಂದರು.