ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮವು ಆರ್ಥಿಕ ಕುಸಿತ ಕಾಣುತ್ತಿರುವ ದೇಶದ ಆರ್ಥಿಕತೆಯನ್ನು ಮತ್ತಷ್ಟು ಹದಗಡೆಸಲಿದೆ ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಅಭಿಪ್ರಾಯಪಟ್ಟಿದ್ದಾರೆ.
ಅಂತರಾಷ್ಟ್ರೀಯ ಆರ್ಥಿಕತೆಯ ಬಗ್ಗೆ ವಿಸ್ತ್ರತ ಅಧ್ಯಯನ ನಡೆಸಿರುವ ಅವರು, ಈಟಿವಿ ಈಟಿವಿ ಭಾರತ್ ಜೊತೆ ಮಾತನಾಡಿ, ಕೇಂದ್ರ ಸರ್ಕಾರದ ಈ ಕ್ರಮ ಆರ್ಬಿಐನ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಹುನ್ನಾರದಂತೆ ಇದೆ ಎಂದು ಆರೋಪಿಸಿದ್ದಾರೆ.
ಕಷ್ಟದ ಕಾಲದಲ್ಲಿ ಉಪಯೋಗಕ್ಕೆ ಬರಲಿ ಎನ್ನುವ ಉದ್ದೇಶದಿಂದ ದೇಶದ ಎಲ್ಲಾ ನಾಗರೀಕರು ಮೀಸಲು ನಿಧಿಯನ್ನು ತಮ್ಮಲ್ಲಿ ಉಳಿಸಿಕೊಂಡಿರುತ್ತಾರೆ. ಇದೇ ರೀತಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ಥಾಪನೆಯ ವರ್ಷದಿಂದಲೂ ಮೀಸಲು ನಿಧಿಯನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ದೇಶದಲ್ಲಿ ಆಗಬಹುದಾದ ಆರ್ಥಿಕ ಕುಸಿತ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ನಮ್ಮ ದೇಶದ ಆರ್ಥಿಕತೆಯನ್ನು ಸಧೃಢವಾಗಿ ಇಡುವುದು ಇದರ ಪ್ರಮುಖ ಉದ್ದೇಶ. ಸುಮಾರು 2.3 ಲಕ್ಷಕೋಟಿಗಳಷ್ಟು ಹಣ ಈ ಮೀಸಲು ನಿಧಿಯಲ್ಲಿದೆ ಎಂದು ಮಾಹಿತಿ ನೀಡಿದರು.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2018 ರ ಚುನಾವಣೆಗೂ ಮುನ್ನವೇ ಈ ಹಣವನ್ನು ಪಡೆಯುವ ಪ್ರಯತ್ನ ಮಾಡಿತ್ತು. ಆದರೆ, ಬಿಜೆಪಿಯಿಂದ ನೇಮಕವಾದ ಅಂದಿನ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರೇ ಇದನ್ನು ವಿರೋಧಿಸಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೇಂದ್ರದ ಇಂದಿನ ಹಣಕಾಸು ಮಂತ್ರಿಗಳಾದ ನಿರ್ಮಲಾ ಸೀತಾರಾಮನ್, ಹಿಂದಿನ ಆರ್ಬಿಐ ಗವರ್ನರ್ ಅವರ ನಿರ್ಣಯ ಸರಿಯಿಲ್ಲ, ಹಾಗೂ ಸರ್ಕಾರಕ್ಕೆ ಈ ಮೀಸಲು ನಿಧಿಯನ್ನು ಬಳಸಿಕೊಳ್ಳುವ ಎಲ್ಲಾ ರೀತಿಯ ಹಕ್ಕು ಇದೆ ಎಂದು ತಾವು ಮಂಡಿಸಿದ ಬಜೆಟ್ನಲ್ಲಿನ ಕೊರತೆ ಮೊತ್ತಕ್ಕೆ ಸಮಾನವಾದ ಹಣವನ್ನು ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಸರಿಯಲ್ಲ ಎಂದು ವಿವರಿಸಿದರು.
ನೋಟು ಅಮಾನ್ಯದ ನೇರ ಪರಿಣಾಮ:
ಈ ವಿತ್ತೀಯ ಕೊರತೆ ಉಂಟಾಗಿದ್ದು 2018 ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ನೋಟು ಅಮಾನ್ಯೀಕರಣದ ನೇರ ಪರಿಣಾಮದಿಂದಾಗಿ. ಭಾರತ ದೇಶದ ಶೇ.86 ರಷ್ಟು ಜನರು ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹಾಗೂ ಅವರ ಪ್ರತಿನಿತ್ಯದ ಜೀವನ ನಡೆಯುವುದು ನಗದಿನ ಮೂಲಕ. ನೋಟು ಅಮಾನ್ಯೀಕರಣದಿಂದ ಈ ವಲಯಕ್ಕೆ ಹೆಚ್ಚಿನ ಹೊಡೆತ ಬಿದ್ದಿದ್ದು, ಕಳೆದ 40 ವರ್ಷದಲ್ಲಿಯೇ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಈ ನಿರುದ್ಯೋಗ ಆಟೋ ಮೊಬೈಲ್ ಕೈಗಾರಿಕೆ, ರಿಯಲ್ ಎಸ್ಟೇಟ್, ಸರ್ವೀಸ್ ಇಂಡಸ್ಟ್ರಿ ಹಾಗೂ ಕೃಷ್ಟಿ ಸೇರಿದಂತೆ ಇನ್ನಿತರ ವಲಯಗಳಿಗೆ ದೊಡ್ಡ ಹೊಡೆತ ನೀಡಿದೆ ಎಂದು ಮಾಹಿತಿ ನೀಡಿದರು.