ಬೆಂಗಳೂರು: ಪ್ರತಿ ದಿನ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಜನರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಲಾಕ್ ಡೌನ್ಗೆ ಕರೆ ನೀಡಿದ್ದಾರೆ. ಕೆಲವರು ಮಾತ್ರ ಮನೆಯಿಂದ ಹೊರ ಬಾರದೆ ಸುರಕ್ಷಿತವಾಗಿದ್ದರೆ ಮತ್ತೆ ಕೆಲವರು ಯಾವುದಕ್ಕೂ ಹೆದರದೆ, ಸಾಮಾಜಿಕ ಅಂತರ ಕೂಡಾ ಕಾಯ್ದುಕೊಳ್ಳದೆ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.
ಇನ್ನು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಿನಿಮಾ ನಟರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೊರೊನಾ ಜಾಗೃತಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಹೆಚ್ಚಾಗಿ ಪೊಲೀಸರು ಕೂಡಾ ಸಾರ್ವಜನಿಕರಿಗೆ ತಿಳಿ ಹೇಳಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಸಂಚಾರಿ ಪೊಲೀಸರು ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ನವರಂಗ್, ಮಲ್ಲೇಶ್ವರಂ ಸರ್ಕಲ್ ಬಳಿಯ ರಸ್ತೆ ಮೇಲೆ ಕೊರೊನಾ ವೈರಸ್ ಚಿತ್ರ ಬಿಡಿಸಿ ಸಾರ್ವಜನಿಕರು ಯಾರೂ ಹೊರ ಬರಬೇಡಿ ಎಂದು ಬರೆದು ಎಚ್ಚರಿಸುತ್ತಿದ್ದಾರೆ. ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಅನಿಲ್ ನೇತೃತ್ವದಲ್ಲಿ ಮಲ್ಲೇಶ್ವರಂ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಕೊರೊನಾ ಚಿತ್ರ ಬಿಡಿಸುತ್ತಿದ್ದಾರೆ. ಆದರೆ ಜಾಗೃತಿ ಮೂಡಿಸುವ ಚಿತ್ರಗಳನ್ನ ಬಿಡಿಸಿದರೂ ಜನರು ಮಾತ್ರ ಅನಗತ್ಯವಾಗಿ ರಸ್ತೆಗೆ ಬರುವುದನ್ನು ಕಡಿಮೆ ಮಾಡಿಲ್ಲ.