ಬೆಂಗಳೂರು: ರಾಮನಗರಕ್ಕೆ ಕರೆತಂದಿದ್ದ ಪಾದರಾಯನಪುರ ಗಲಭೆಯ ಆರೋಪಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಸೋಂಕಿತರಲ್ಲಿ ರೋಗಿ ಸಂಖ್ಯೆ 454 ಹಾಗೂ ರೋಗಿ ಸಂಖ್ಯೆ 449ಕ್ಕೆ ರೋಗಿಗಳ ಮನೆಯವರಿಗೂ ಸೋಂಕು ಹರಡಿರುವುದು ದೃಢಪಟ್ಟಿದೆ.
ಐವರಿಗೆ ಸೋಂಕು ಪತ್ತೆಯಾದ ಕೂಡಲೇ ಅವರ ಪ್ರಥಮ ಸಂಪರ್ಕದಲ್ಲಿದ್ದ ಮನೆಯವರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ 449 ಪ್ರಥಮ ಸಂಪರ್ಕಿತರಾಗಿದ್ದ ಆತನ 31 ವರ್ಷದ ಪತ್ನಿ(ರೋಗಿ-775) ಹಾಗೂ 55 ವರ್ಷದ ಆತನ ತಾಯಿ (ರೋಗಿ-761)ಗೂ ಕೊರೊನಾ ಹಬ್ಬಿದೆ.
ಇನ್ನು 454 ಪ್ರಥಮ ಸಂಪರ್ಕಿತರಾದ ಅವನ ಮನೆಯ ಸದಸ್ಯರಿಗೆ ನಾಲ್ಕು ಜನರಿಗೆ ಕೊರೊನಾ ಬಂದಿದೆ. 20 ವರ್ಷದ ಮಹಿಳೆ (ರೋಗಿ-762), 40 ವರ್ಷದ ಮಹಿಳೆ (ರೋಗಿ-763),
19 ವರ್ಷದ ಮಹಿಳೆ (ರೋಗಿ-774), 46 ವರ್ಷದ ಪುರುಷ (ರೋಗಿ-773)ರಲ್ಲಿ ಕೊರೊನಾ ದೃಢಪಟ್ಟಿದೆ.
ಇಷ್ಟೇ ಅಲ್ಲದೆ ಕಂಟೇನ್ಮೆಂಟ್ ಝೋನ್ನಲ್ಲಿ ವಾಸಿಸುತ್ತಿದ್ದ 20 ವರ್ಷದ ಗರ್ಭಿಣಿ ಮಹಿಳೆಗೂ ಕೊರೊನಾ ಸೋಂಕು ಹಬ್ಬಿದೆ. ಆದ್ರೆ ಅದೃಷ್ಟವಶಾತ್ ಇಂದು ಆಕೆಗೆ ಅವಳಿ-ಜವಳಿ ಮಕ್ಕಳ ಹೆರಿಗೆಯಾಗಿದ್ದು, ಮಕ್ಕಳಿಗೆ ಕೊರೊನಾ ಹರಡಿಲ್ಲ.
ಒಟ್ಟಿನಲ್ಲಿ ಪಾದರಾಯನಪುರದ ಗಲಭೆಯ ಆರೋಪಿಗಳ ಮನೆಯ ಆರು ಮಂದಿ, ಒಬ್ಬ ಮಹಿಳೆ ಸೇರಿ ಏಳು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 33 ಮಂದಿ ಪ್ರಥಮ ಸಂಪರ್ಕಿತರ ಟೆಸ್ಟ್ನಲ್ಲಿ ಆರು ಮಂದಿಗೆ ಕೊರೊನಾ ದೃಢಪಟ್ಟಿದೆ. ಇನ್ನು ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿದ್ದ 108 ಜನರ ಸೋಂಕು ಪರೀಕ್ಷೆಯ ಫಲಿತಾಂಶ ಬರುವುದು ಬಾಕಿ ಉಳಿದಿದೆ.
ಇದೇ ವೇಳೆ, ಆರೋಪಿಗಳ ಪ್ರಥಮ ಸಂಪರ್ಕದಲ್ಲಿದ್ದ 59 ಪೊಲೀಸರ ವರದಿ ನೆಗೆಟಿವ್ ಬಂದಿದೆ. ಪಾದರಾಯನಪುರ ವಾರ್ಡ್ನಲ್ಲಿ ಈವರೆಗೆ 45 ಜನರಿಗೆ ಕೊರೊನಾ ವೈರಸ್ ಹರಡಿರುವುದು ದೃಢಪಟ್ಟಿದೆ. ಸೋಮವಾರದಿಂದ ವಾರ್ಡ್ ಜನರ ಸೋಂಕು ಪರೀಕ್ಷೆ ನಡೆಸಲಾಗುವುದು ಎಂದು ಪಾದರಾಯನಪುರದ ಬಿಬಿಎಂಪಿ ಆರೋಗ್ಯಾಧಿಕಾರಿ ಮನೋರಂಜನ್ ಹೆಗಡೆ ಈಟಿವಿ ಭಾರತ್ಗೆ ತಿಳಿಸಿದ್ದಾರೆ.