ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಪಕ್ಷದ ನಾಯಕರ ಆಯ್ಕೆ ನಾಳೆ (ಭಾನುವಾರ) ಬೆಳಿಗ್ಗೆ 10.30ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿದೆ. ಅದಕ್ಕಾಗಿಯೇ ಇಂದು ರಾತ್ರಿ ರಾಷ್ಟ್ರೀಯ ಕಾಂಗ್ರೆಸ್ ನಾಯಕ ಮಧುಸೂಧನ್ ಮಿಸ್ತ್ರಿ ಆಗಮಿಸಲಿದ್ದು, ಕುಮಾರಕೃಪ ಅತಿಥಿಗೃಹದಲ್ಲಿ ತಂಗಲಿದ್ದಾರೆ.
ಸಭೆಯಲ್ಲಿ ಅವರು ಪ್ರತಿಯೊಬ್ಬ ನಾಯಕರ ಅಭಿಪ್ರಾಯ ಪಡೆಯಲಿದ್ದಾರೆ. ಬಿಜೆಪಿ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ ಹಾಗೂ ಪಕ್ಷದ ವರ್ಚಸ್ಸನ್ನು ಹೆಚ್ಚಿಸಬಲ್ಲ ವ್ಯಕ್ತಿಯನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದ ಬಳಿಕ ಮಧುಸೂದನ್ ಸಂಜೆ ದೆಹಲಿಗೆ ತೆರಳಲಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿವರಿಸಲಿದ್ದಾರೆ.
ದಿನೇಶ್ ಅನುಪಸ್ಥಿತಿ:
ವಿದೇಶದಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಗೈರಾಗಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಎಂಬಿ ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 10 ರಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಇದರಿಂದಾಗಿ ನಾಳೆಯ ಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆಯ್ಕೆ ಅಂತಿಮವಾಗಲಿದೆ.