ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಗೆಲುವಿನ ಚರ್ಚೆಗೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಜೂ.10ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ವಿಧಾನಸಭೆ ಸದಸ್ಯರು ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ನಾಲ್ಕು ಸ್ಥಾನಗಳಿಗೆ ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್ನ ಒಬ್ಬ ಸದಸ್ಯರು ಈಗಾಗಲೇ ಖಚಿತವಾಗಿದೆ. ಉಳಿದಂತೆ ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷದ ತಲಾ ಒಬ್ಬ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ರಾಜ್ಯಸಭೆ ಚುನಾವಣೆ ಕುತೂಹಲ ಕೆರಳಿಸಿದೆ.
ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅವಶ್ಯಕತೆ ಇದ್ದು, ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲಿದೆ. ಆದರೆ, ನಾಲ್ಕನೇ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಬಿಜೆಪಿಯ ಲೆಹರ್ ಸಿಂಗ್, ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ನ ಕುಪೇಂದ್ರ ರೆಡ್ಡಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಂಡ ಬಳಿಕ ಬಿಜೆಪಿ ಬಳಿ 32 ಹಾಗೂ ಕಾಂಗ್ರೆಸ್ ಬಳಿ 25 ಹೆಚ್ಚುವರಿ ಸದಸ್ಯರ ಬಲ ಇರಲಿದೆ. ಈ ಮತಗಳ ಲಾಭ ಪಡೆಯಬಹುದು ಎಂದು ಒಟ್ಟು 32 ಸದಸ್ಯರ ಬಲ ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಹಿನ್ನೆಲೆ ಚುನಾವಣಾ ಅಖಾಡ ರಂಗೇರಿದೆ.
ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೈರಾಮ್ ರಮೇಶ್ ಗೆಲುವು ಖಚಿತವಾಗಿದೆ. ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಗೆಲುವಿಗೆ ಕಾಂಗ್ರೆಸ್ ನಾಯಕರು ತಂತ್ರಗಾರಿಕೆ ರೂಪಿಸುತ್ತಿದ್ದು, ನಾಳೆ ಇದಕ್ಕೆ ಒಂದು ಅಂತಿಮ ರೂಪ ನೀಡಲು ನಿರ್ಧರಿಸಿ ಶಾಸಕಾಂಗ ಸಭೆ ಕರೆಯಲಾಗಿದೆ.
ಸಂಜೆ 6 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದೆ. ಸಭೆಯಲ್ಲಿ ಜೂ.10 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಬಗ್ಗೆ ಚರ್ಚಿಸಲಾಗುವುದು. ಈ ಸಭೆಯ ಅಧ್ಯಕ್ಷತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಹಿಸಲಿದ್ದಾರೆ.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕ ಯು.ಟಿ ಖಾದರ್, ವಿಧಾನ ಪರಿಷತ್ ಪ್ರತಿಪಕ್ಷದ ಉಪನಾಯಕ ಕೆ.ಗೋವಿಂದರಾಜ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಧ್ರುವ ನಾರಾಯಣ್, ಸಲೀಂ ಅಹಮದ್ ಹಾಗೂ ಸತೀಶ್ ಜಾರಕಿಹೊಳಿ ಇರಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ.
ಶಾಸಕಾಂಗ ಪಕ್ಷದ ಎಲ್ಲ ಶಾಸಕರುಗಳು ಸಭೆಗೆ ತಪ್ಪದೇ ಹಾಜರಾಗಿ ಸಭೆಯಲ್ಲಿ ತಮ್ಮ ಸಲಹೆ ಸೂಚನೆಯನ್ನು ನೀಡುವಂತೆ ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಎಲ್ಲ ಶಾಸಕರಿಗೂ ಈಗಾಗಲೇ ವಿಪ್ ಜಾರಿ ಮಾಡಲಾಗಿದೆ. ಈ ಬಗ್ಗೆಯೂ ಹೊಸ ಸದಸ್ಯರಿಗೆ ಕಾಂಗ್ರೆಸ್ ನಾಯಕರು ಮನವರಿಕೆ ಮಾಡಿಕೊಡಲಿದ್ದಾರೆ.
ಇದನ್ನೂ ಓದಿ: ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ: ಜೈರಾಮ್ ರಮೇಶ್ಗಿಂತ ಮನ್ಸೂರ್ ಅಲಿಖಾನ್ ಶ್ರೀಮಂತ