ಬೆಂಗಳೂರು: ಖಾಸಗಿ ಶಾಲೆಗಳ ನೆರವಿಗೆ ಬಾರದ ಸರ್ಕಾರದ ವಿರುದ್ಧ ಮತ್ತೆ ನೊಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಸಂಘವೂ(ರೂಪ್ಸಾ) ತಿರುಗಿ ಬಿದಿದ್ದೆ. ಶಿಕ್ಷಣ ಇಲಾಖೆಯ ಧೋರಣೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ರುಪ್ಸಾ ಕರ್ನಾಟಕ ಮುಂದಾಗಿದೆ.
ಈ ಕುರಿತು ಮಾತನಾಡಿದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆಯನ್ನು ರುಪ್ಸಾ ಸಂಘ ಕರೆದಿದ್ದು, ಸಭೆಯಲ್ಲಿ ಸರ್ಕಾರದ ಧೋರಣೆ ಖಂಡಿಸಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಲಿದ್ದಾರೆ. 30 ಜಿಲ್ಲೆಗಳ ರುಪ್ಸಾ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ. ಕೊರೊನಾದಿಂದಾಗಿ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಇತ್ತ ಶಾಲೆ ಪ್ರಾರಂಭವಾದರೂ ಸಹ ಪೋಷಕರು ಶುಲ್ಕ ನೀಡುತ್ತಿಲ್ಲ. ಸಿಬ್ಬಂದಿಗೆ ಸಂಬಳ ನೀಡಲು ಶಾಲಾ ಆಡಳಿತ ಮಂಡಳಿ ಪರದಾಡುತ್ತಿದೆ ಎಂದರು.
ಇನ್ನು ಶುಲ್ಕ ಕಡಿತದ ಬಗ್ಗೆ ಈಗಾಗಲೇ ಕ್ಯಾಮ್ಸ್ ಸಂಘಟನೆ ಕೋರ್ಟ್ ಮೆಟ್ಟಿಲೇರಿದೆ. ಶುಲ್ಕ ಕಡಿತವನ್ನು ರುಪ್ಸಾ ಸಂಘಟನೆ ಸ್ವಾಗತಿಸಿದ್ದು, ಶುಲ್ಕದ ಗೊಂದಲವನ್ನು ಸರ್ಕಾರ ಬಗೆಹರಿಸದ ಕಾರಣ ಖಾಸಗಿ ಶಾಲೆಗಳು ಅತಂತ್ರದಲ್ಲಿ ಸಿಲುಕಿವೆ. ಶಿಕ್ಷಣ ಇಲಾಖೆ ಶೇ.30 ರಷ್ಟು ಶುಲ್ಕ ಕಡಿತ ಮಾಡಿದೆ. ಆದರೆ, ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಇನ್ನೂ ಪೋಷಕರು ಶುಲ್ಕ ಕಟ್ಟಿಲ್ಲ. ನಿತ್ಯ ಪೋಷಕರು ಹಾಗೂ ಖಾಸಗಿ ಶಾಲೆಗಳ ಮುಖ್ಯಸ್ಥರ ಜೊತೆ ತಿಕ್ಕಾಟ ಮುಂದುವರೆದಿದೆ. ಶುಲ್ಕದಲ್ಲಿರುವ ಗೊಂದಲಗಳನ್ನು ಬಗೆಹರಿಸುವಂತೆ ಸರ್ಕಾರಕ್ಕೆ ರುಪ್ಸಾ ಒತ್ತಾಯ ಮಾಡಲಿದ್ದು, ನಾಳೆ ಸಭೆಯ ನಂತರ ಮುಂದಿನ ಹೋರಾಟದ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು.