ಬೆಂಗಳೂರು: ನೆರೆಪೀಡಿತ ಪ್ರದೇಶಗಳ ಜನರಿಗೆ ಇಂದು ಅಥವಾ ನಾಳೆ ಕೇಂದ್ರದಿಂದ ಅನುದಾನ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೆರೆಪೀಡಿತ ಪ್ರದೇಶಗಳ ಪರಿಹಾರ ಕಾರ್ಯಾಚರಣೆಗೆ ಇವತ್ತು, ನಾಳೆ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆ ಆಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈಗ ಬಂದು ಚರ್ಚಿಸಿದರು. ನಮ್ಮ ರಾಜ್ಯ ಸೇರಿದಂತೆ ನಾಲ್ಕೈದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಒಟ್ಟಿಗೆ ಪರಿಹಾರ ಬಿಡುಗಡೆ ಮಾಡಲಿದೆ ಎಂದರು.
ಉಪ ಚುನಾವಣೆಗೆ ಮತ್ತೆ ದಿನಾಂಕ ನಿಗದಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೌದ್ರಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅದನ್ನ ನಗುತ್ತಾ ಚುನಾವಣೆ ಎದುರಿಸಬೇಕು ಎಂದರು. ಅಕ್ಟೋಬರ್ 3ಕ್ಕೆ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಸಭೆಯಲ್ಲಿ ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ಮಾಡುತ್ತೇವೆ. ವಿಜಯನಗರ ಜಿಲ್ಲೆ ಘೋಷಣೆ ವಿಚಾರ ಸಂಬಂಧ ಎಲ್ಲರನ್ನೂ ಕರೆದು ಮಾತನಾಡುತ್ತೇನೆ ಎಂದರು.
ಅರಮನೆ ಮೈದಾನದಲ್ಲಿ ಜೈನ ಸಮುದಾಯದ ಕಾರ್ಯಕ್ರಮವಿದೆ. ಈಗ ಇದನ್ನು ಮುಗಿಸಿ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡ್ತೇನೆ. ನಾಳೆ ಮೈಸೂರಿನಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮವಿದ್ದು, ಅಲ್ಲಿಗೆ ತೆರಳುತ್ತೇನೆ ಎಂದರು.