ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗಳ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಿಎಂ ಕಚೇರಿ ಕೃಷ್ಣದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರಿಂದ ಮುತ್ತಿಗೆ, ಸಂಸದ ತೇಜಸ್ವಿ ಸೂರ್ಯ ಮನೆ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಮನೆ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಈ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಸಿಎಂ ನಿವಾಸದ ಮುಂದೆಯೂ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಎರಡು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಇತ್ತ ಮಲ್ಲೇಶ್ವರಂ ಬಿಜೆಪಿ ಕಚೇರಿಗೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ತಮ್ಮ ಪಕ್ಷದ ಮೇಲೆಯೇ ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳು ತಿರುಗಿಬಿದ್ದು, ಸಚಿವರ ಮನೆ ಮುಂದೆ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸ, ರಾಜ್ಯ ಬಿಜೆಪಿ ಕಚೇರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.
ಗೃಹ ಸಚಿವರ ಮನೆಗೆ ಮುತ್ತಿಗೆ: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಾಗೂ ಕಠಿಣ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸುಮಾರು 50 ಕಾರ್ಯಕರ್ತರು ಗೃಹ ಸಚಿವರ ನಿವಾಸದ ಗೇಟ್ ತಳ್ಳಿ ಇಂದು ಬೆಳಗ್ಗೆ ಒಳನುಗ್ಗಿ ಮುತ್ತಿಗೆ ಹಾಕಿದ್ದರು. ಬಳಿಕ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಿವಾಸದ ಮುಂದೆ ಧರಣಿ ನಡೆಸಿದರು. ಈ ವೇಳೆ, ಗೃಹ ಸಚಿವರು ನಿವಾಸದಲ್ಲಿ ಇರಲಿಲ್ಲ. ಆಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು. ಮುತ್ತಿಗೆ ಹಾಕಿದ ಎಬಿವಿಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಅಲ್ಲದೆ, ಪ್ರತಿಭಟನಾಕಾರನ್ನು ಪೊಲೀಸರು ವಶಕ್ಕೆ ಪಡೆದರು. ಸದ್ಯ ನಿವಾಸದ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
(ಇದನ್ನೂ ಓದಿ: ಗೃಹ ಸಚಿವ ನಿವಾಸ ಮುತ್ತಿಗೆ: ಪ್ರವೀಣ್ ಕೊಲೆ ಪ್ರಕರಣದ ಪ್ರಗತಿ ಬಗ್ಗೆ ಡಿಜಿಪಿ ಸೂದ್ಗೆ ಸಿಎಂ ತರಾಟೆ)