ಬೆಂಗಳೂರು: ಲಾಕ್ಡೌನ್ನಿಂದ ಬೆಂಗಳೂರಿನಲ್ಲೇ ಲಕ್ಷಾಂತರ ಕಾರ್ಮಿಕರು ಪರದಾಡುತ್ತಿದ್ದಾರೆ. ಹೀಗಾಗಿ, ಅವರವರ ರಾಜ್ಯಕ್ಕೆ ವಲಸೆ ಕಾರ್ಮಿಕರನ್ನು ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಹಲವರು ತಮ್ಮ ತಮ್ಮ ತವರುಗಳಿಗೆ ಮರಳಿದ್ದಾರೆ.
ಇನ್ನುಳಿದ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕಳಿಸಲು 9 ರಾಜ್ಯಗಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಜಾರ್ಖಂಡ್, ಬಿಹಾರ್, ಉತ್ತರಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ರಾಜ್ಯಗಳಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿದ್ದು, ಇದುವರೆಗೆ ಬಿಹಾರದಿಂದ ಮಾತ್ರ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಉಳಿದ ರಾಜ್ಯಗಳ ಅನುಮತಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.
ವಲಸಿಗರು ತಮ್ಮ ರಾಜ್ಯಗಳಿಗೆ ತೆರಳಲು ಇಂದಿನಿಂದ ಮೂರು ಶ್ರಮಿಕ್ ರೈಲುಗಳ ಸಂಚಾರ ಇರಲಿದ್ದು, ಸಂಜೆ 4ಕ್ಕೆ ಬಿಹಾರದ ಧನಪುರ್, ಉತ್ತರಪ್ರದೇಶ ಲಖ್ನೋ ಹಾಗೂ ಮತ್ತೆ ಸಂಜೆ 6ಕ್ಕೆ ಮತ್ತೊಂದು ರೈಲು ಲಖ್ನೋಗೆ ತೆರಳಲಿದೆ. ಆದರೆ ಈ ರೈಲುಗಳು ಯಾವ ನಿಲ್ದಾಣದಿಂದ ಹೊರಡುತ್ತವೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ ಎಂದು ನೈರುತ್ಯ ಇಲಾಖೆ ಮಾಹಿತಿ ನೀಡಿದೆ.