ಬೆಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, 14 ಕೆ.ಜಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿಯಲ್ಲಿ ಓರ್ವನ ಬಂಧನ: ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಸುನೀಲ್ ಎಂಬಾತನನ್ನು ಬಂಧಿಸಿರುವ ಪೊಲೀಸರು 10 ಕೆ.ಜಿ 200 ಗ್ರಾಂ ಗಾಂಜಾ ಜೊತೆ 500 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 7 ರಂದು ಬೆಳಗ್ಗೆ ಇನ್ಸ್‌ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯಲ್ಲಿ ಇಬ್ಬರ ಬಂಧನ: ಫೆಬ್ರವರಿ 11 ರಂದು ಬೆಳಗ್ಗೆ 8.30 ರ ಸುಮಾರಿಗೆ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಬ್ಯಾಡರಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ರವಿ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಹಿರಿಯ ಕವಿ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಪಾಟೀಲ್
ಸೂರ್ಯನಾರಾಯಣ ಮತ್ತು ಲೋಕೇಶ್ ಬಂಧಿತರು. ಗಾಂಜಾ ಸರಬರಾಜು ಮಾಡಿಕೊಂಡು ನಗರದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಿ ಹಣಗಳಿಸುತ್ತಿದ್ದರು. ಆರೋಪಿಗಳಿಂದ 4 ಕೆ.ಜಿ 422 ಗ್ರಾಂ ಗಾಂಜಾ ಹಾಗೂ 500 ರೂ. ವಶಪಡಿಸಿಕೊಳ್ಳಲಾಗಿದೆ.