ಬೆಂಗಳೂರು : ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಜಾಮೀನು ರಹಿತ ಅಪರಾಧವಾಗಿ ಮಾಡಲು ಕಠಿಣ ಕಾನೂನು ತಿದ್ದುಪಡಿ ತರಲಿದ್ದೇವೆ. ತಪ್ಪಿತಸ್ಥರಿಗೆ ಗಂಭೀರ ರೀತಿಯ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷೆ ಹೆಚ್ಚಿಸಲು ಕ್ರಮವಹಿಸುತ್ತೇವೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಪೇಪರ್ ಲೀಕ್ ಈ ಮೊದಲೂ ಆಗುತ್ತಿತ್ತು. ಆಯಾ ವಿವಿಗಳಿಗೆ ಸ್ವಾಯತ್ತತೆ ಇದೆ. ಆ ತರ ಆದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುತ್ತದೆ. ಜಾಮೀನು ರಹಿತ ಅಪರಾಧವಾಗಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ನೀಟ್ ಮಾದರಿ ಗೈಡ್ ಲೈನ್ಸ್ : ಸಿಇಟಿ ಪರೀಕ್ಷೆಯಲ್ಲಿ ನೀಟ್ ಮಾದರಿಯ ಮಾರ್ಗಸೂಚಿ ಇರಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಸಿಇಟಿ ಪರೀಕ್ಷೆಯಲ್ಲಿ ಹಿಜಾಬ್ಗೆ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ನೀಟ್ ಮಾದರಿಯಲ್ಲಿ ಸಿಇಟಿಯಲ್ಲೂ ಗೈಡ್‌ಲೈನ್ಸ್ ಇರಲಿದೆ. ಆ ಗೈಡ್ ಲೈನ್ಸ್ನ್ನು ಇಲ್ಲೂ ಅನುಸರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜಕೀಯ ಪ್ರೇರಿತ ದೂರು : ಮಂಡ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರ ಆರೋಪಕ್ಕೆ ಡಾ.ಅಶ್ವತ್ಥ್ ನಾರಾಯಣ ಸ್ಪಷ್ಟನೆ ನೀಡುತ್ತ, ನಾನು ನಿಯಮಬಾಹಿರವಾಗಿ ಪ್ರಚಾರಕ್ಕೆ ಹೋಗಿಲ್ಲ. ನಿಯಮದ ಪ್ರಕಾರ ಪ್ರಚಾರಕ್ಕೆ ಹೋಗಿದ್ದೇನೆ. ಮತದಾರರ ಬಳಿಗೆ ಹೋಗಿ ಮತಯಾಚನೆ ಮಾಡಿದ್ದೇನೆ.
ಸುಳ್ಳು ಕೇಸ್‌ಗಳನ್ನು ಹಾಕಲಾಗಿದೆ. ಒಳ್ಳೆಯ ಕೆಲಸ ಮಾಡಿದವರಿಗೆ ಮತ ಹಾಕುತ್ತಾರೆ. ಒಳ್ಳೆಯ ಕೆಲಸ ಮಾಡದಿದ್ದರೆ ಯಾಕೆ ಮತ ಹಾಕ್ತಾರೆ? ಇವೆಲ್ಲವೂ ಸುಳ್ಳು ಆರೋಪ ಎಂದರು. ಬೆಂಗಳೂರು ವಿವಿಯಲ್ಲಿ ಹಣದ ಅವ್ಯವಹಾರ ಸಂಬಂದ ಪ್ರತಿಕ್ರಿಯಿಸಿದ ಸಚಿವರು, ಸಿಂಡಿಕೇಟ್ ಒಪ್ಪಿಗೆ ಪಡೆದೇ ಹಣ ಬಿಡುಗಡೆ ಮಾಡಲಾಗಿದೆ.
ಯಾವುದೇ ಕಾಯ್ದೆ ಉಲ್ಲಂಘನೆ ಆಗಿಲ್ಲ. ಇದು ಯಾವುದೇ ವಿದೇಶಿ ವಿವಿ ಅಲ್ಲ. ವಿವಿ ಬಳಕೆಗಾಗಿನೇ ಹಣ ಬಿಡುಗಡೆ ಮಾಡಲಾಗಿದೆ. ಇದನ್ನು ರಾಜಕೀಯ ಮಾಡಬಾರದು. ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಯಾವುದೇ ಗೊಂದಲ ಇಲ್ಲ, ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೇಮಕಾತಿ ಅಕ್ರಮದಲ್ಲಿ ಯಾರನ್ನೂ ರಕ್ಷಿಸಲ್ಲ : ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಸಂಬಂಧ ಮುಕ್ತ ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಯಾವುದಕ್ಕೂ ರಕ್ಷಣೆ ಕೊಡುವ ಪ್ರಶ್ನೆ ಇಲ್ಲ. ಮುಕ್ತವಾಗಿ ತನಿಖೆ ನಡೆಯುತ್ತಿದೆ. ಪಾರದರ್ಶಕವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಶೋಭೆ ತರಲ್ಲ : ಆರ್ಎಸ್ಎಸ್ ನಪುಂಸಕ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಇದನ್ನು ಖಂಡಿಸುತ್ತೇವೆ. ಇದು ಸಿದ್ದರಾಮಯ್ಯಗೆ ಶೋಭೆ ತರಲ್ಲ ಎಂದರು. ಇದು ರಾಜ್ಯದ ಜನರಿಗೆ ಮಾಡಿದ ಅವಮಾನ. ಅಂಥ ಹೇಳಿಕೆಗಳನ್ನು ಕೊಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: UPSCಯಲ್ಲಿ ಶೃತಿ ಶರ್ಮಾ ಟಾಪರ್..ಕರ್ನಾಟಕದ 25 ಅಭ್ಯರ್ಥಿಗಳು ಪಾಸ್.. ಅಭಿನಂದನೆ ಸಲ್ಲಿಸಿದ ನಮೋ