ಬೆಂಗಳೂರು: ಕನ್ನಡಕ್ಕೆ ರೋಚಕ ಇತಿಹಾಸವಿದೆ, ಮಾತೃ ಭಾಷೆ ಸದಾ ಅಭಿವೃದ್ಧಿಯಾದಾಗ ಕನ್ನಡ ಮತ್ತು ಕನ್ನಡಿಗರ ಬದುಕು ಬೆಳೆಯುತ್ತದೆ. ಈ ಅರಿವಿನಿಂದ ನಾವು ಕೆಲಸ ಮಾಡಬೇಕು. ಇತರೆ ಭಾಷೆಗಳನ್ನು ಕಲಿಯುವುದು ಹಾಗು ಬಳಕೆ ಮಾಡುವುದು ದೊಡ್ಡ ತಪ್ಪು ಎನ್ನುವುದಕ್ಕಿಂತ ನಮ್ಮ ಭಾಷೆಯನ್ನು ಎಷ್ಟು ಬಳಸಿ ಹಾಗೂ ಬೆಳೆಸುತ್ತೇವೆ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಶುಕ್ರವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕನ್ನಡ ರಥ-ಕಾಯಕ ಪಥ ಪುಸ್ತಕ ಲೋಕಾರ್ಪಣೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೂರು ದಶಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು, ಗೋಕಾಕ್ ಚಳವಳಿಯಿಂದ ಕನ್ನಡದಲ್ಲಿ ದೊಡ್ಡ ಬದಲಾವಣೆ ಆಗಿದೆ. ಕನ್ನಡ ನಾಡಿನ ಜನಸಾಮಾನ್ಯರು, ವಿದ್ಯಾರ್ಥಿಗಳು, ರೈತರು, ಸಾಹಿತಿಗಳು, ಕೂಲಿಕಾರ್ಮಿಕರು ಎಲ್ಲರೂ ಚಳವಳಿಗೆ ಧುಮುಕಿದ್ದರು. ಕನ್ನಡದ ಪ್ರಜ್ಞೆ ಕಾಯ್ದುಕೊಳ್ಳಲು ಕನ್ನಡ ಕಾವಲು ಸಮಿತಿ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ನೇಮಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿ ರೂಪಾಂತರವಾಯಿತು. ಹೀಗೆ ಕನ್ನಡದ ಅಭಿವೃದ್ಧಿಗೆ ದೊಡ್ಡ ಶಕ್ತಿ ಸಿಕ್ಕಿತು ಎಂದು ನುಡಿದರು.
ಕನ್ನಡಕ್ಕೆ ಅಪಾಯವಿದೆ ಎನ್ನುವ ಭಯ ಕಾಡುತ್ತಿದೆ: ಆಡಳಿತದಲ್ಲಿ, ಸಾಮಾಜಿಕವಾಗಿ, ಸಾಹಿತ್ಯದಲ್ಲಿ ಕನ್ನಡ ಅಭಿವೃದ್ಧಿಯ ಕೆಲಸ 3 ದಶಕಗಳಲ್ಲಿ ಬಹಳಷ್ಟು ಆಗಿದೆ. ಆದರೂ ಕನ್ನಡಕ್ಕೆ ಅಪಾಯವಿದೆ ಎನ್ನುವ ಭಯ ಕಾಡುತ್ತಿದೆ. ಬೇರೆ ಭಾಷೆಗಳ ಆಕ್ರಮಣ ಇದಕ್ಕೆ ಕಾರಣ ಎಂದು ಹೇಳಿದರು.
ಬೈಯುವಾಗಲೂ ಅತ್ಯಂತ ಸೂಕ್ಷ್ಮ ಪದಗಳ ಬಳಕೆ: ನಮ್ಮದು ಸುಸಂಸ್ಕೃತ ಭಾಷೆ. ಬೈಯುವಾಗಲೂ ಅತ್ಯಂತ ಸೂಕ್ಷ್ಮವಾಗಿ ಪದಗಳನ್ನು ಬಳಸಲಾಗುತ್ತದೆ. ಅತಿ ಸಹಿಷ್ಣುತೆಯ ಸಂಸ್ಕೃತಿ. ಅತಿ ಎನ್ನುವುದನ್ನು ಬಿಟ್ಟು ಸಹಿಷ್ಣುತೆಯನ್ನು ಮಾತ್ರ ಇಟ್ಟುಕೊಳ್ಳಬೇಕು. ಸಹಿಷ್ಣುತೆಯಿಲ್ಲದವರು ಅದನ್ನು ರೂಢಿಸಿಕೊಂಡಾಗ ಭಾಷೆ, ಭಾಷೆಗಳ ಮಧ್ಯೆ ಸಾಮ್ಯ, ಬಾಂಧವ್ಯ ಉಂಟಾಗುತ್ತದೆ. ಆದರೆ, ಇದು ಸುಲಭವಲ್ಲ ಎಂದರು.
ಕನ್ನಡದ ಸಾಹಿತ್ಯ ಭಂಡಾರ ದೊಡ್ಡದು: ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡವನ್ನು ಉಳಿಸಿ ಬೆಳೆಸಲು ಬದುಕಿನ ಪ್ರತಿ ಆಯಾಮದಲ್ಲಿಯೂ ಕನ್ನಡವನ್ನು ಬಳಕೆ ಮಾಡಬೇಕು. ಕನ್ನಡದ ಬಗ್ಗೆ ನಮ್ಮ ಮನೋಭಾವ, ಧೋರಣೆ ನಿತ್ಯವೂ ಜಾಗೃತವಾಗಿರಬೇಕು. ಕನ್ನಡದ ಸಾಹಿತ್ಯ ಭಂಡಾರ ಬಹಳ ದೊಡ್ಡದಿದೆ. ಅದನ್ನು ಸರಿಯಾದ ರೀತಿಯಲ್ಲಿ ಪ್ರತಿಬಿಂಬಿಸಬೇಕು. ಕನ್ನಡದ ಸಾಹಿತ್ಯವನ್ನು ಕನ್ನಡದಲ್ಲಿ ಪ್ರಚಾರ ಮಾಡಲು ನಾವು ತಿಣುಕಾಡುವ ಸ್ಥಿತಿ ಇದೆ. ಬೇರೆ ಭಾಷೆಯಲ್ಲಿ ಒಂದು ಪುಸ್ತಕ ಬಂದರೆ ಇಂಗ್ಲಿಷ್‍ಗೆ ಅನುವಾದವಾಗಿ ಪ್ರಚಾರ ದೆಹಲಿಯಲ್ಲಿ ಆಗುತ್ತದೆ. ನಮ್ಮಲ್ಲಿ ಎಲ್ಲ ವಿಚಾರಗಳಲ್ಲಿ ಉತ್ಕೃಷ್ಟ ಸಾಹಿತ್ಯವಿದೆ. ನಮಗೆ ಅತ್ಯಂತ ರೋಚಕವಾದ ಇತಿಹಾಸವಿದೆ. ನಾವು ಸ್ಥಳೀಯ ಇತಿಹಾಸವನ್ನು ಮರೆತುಬಿಟ್ಟಿದ್ದೇವೆ. ಮೈಲಾರ ಮಹಾದೇವಪ್ಪ, ಕನ್ನೇಶ್ವರ ರಾಮ, ವೀರ ಸಿಂದೂರ ಲಕ್ಷ್ಮಣ ಸ್ವತಂತ್ರ ಹೋರಾಟದ ಸ್ಥಳೀಯ ನಾಯಕರು ಇವರ ಬಗ್ಗೆ ನಾವು ಚರ್ಚೆ, ಮಾತನಾಡುವುದರಿಂದ ಅವರ ವ್ಯಕ್ತಿತ್ವದ ಜೊತೆಗೆ ಭಾಷೆಯ ಶ್ರೀಮಂತಿಕೆಯೂ ಆಗುತ್ತದೆ ಎಂದು ಅಭಿಪ್ರಾಯಟ್ಟರು.
ನಮ್ಮ ಭಾಷೆಯಲ್ಲಿ ಬದುಕಿನ ಮೌಲ್ಯ: ಬದುಕಿನ ಮೌಲ್ಯವನ್ನು ಹೇಳುವಂತಹ ಅದ್ಭುತವಾದ ವಚನ ಸಾಹಿತ್ಯ, ದಾಸ ಸಾಹಿತ್ಯ ನಮ್ಮಲ್ಲಿದೆ. ನಮ್ಮ ಭಾಷೆಯಲ್ಲಿ ನಮ್ಮದೇಯಾದ ಶಬ್ಧ ಕೋಶವಿದೆ. ಬೇರೆ ಭಾಷೆಗಳಲ್ಲಿ ಅಭಿವ್ಯಕ್ತ ಮಾಡುವ ಶಕ್ತಿ ಇಲ್ಲದೇ ಸಂಸ್ಕೃತವನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಇದು ಬೇರೆ ಭಾಷೆಗಳಿಗೂ ನಮ್ಮ ಭಾಷೆಗೂ ಇರುವ ವ್ಯತ್ಯಾಸ. ವಿದೇಶಗಳಲ್ಲಿರುವ ನಮ್ಮ ಕನ್ನಡಿಗರಿಗೆ ಕನ್ನಡದ ಮೇಲೆ ಬಹಳಷ್ಟು ಪ್ರೀತಿ, ಅಭಿಮಾನವಿದೆ. ಅಮೆರಿಕದಲ್ಲಿ ಕನ್ಮಡ ಸಾಹಿತ್ಯ ರಚನೆಯಾಗಿದೆ. ಅಲ್ಲಿನ ಪುಸ್ತಕಗಳನ್ನು ಓದಿದಾಗ ನನಗೆ ಅಚ್ಚರಿ ಆಗಿತ್ತು. ಬೇರೆ ಬೇರೆ ನಾಯಕರು ಕನ್ನಡದ ಬಗ್ಗೆ ಬಹಳಷ್ಟು ಪ್ರೀತಿ ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ವ್ಯಾಪಕವಾಗಿ ಬೆಳೆಯಲಿ. ಕನ್ನಡದ ಅಭಿವೃದ್ಧಿ, ಬೆಳವಣಿಗೆಗೆ ನಮ್ಮ ಸರ್ಕಾರ ಸದಾಕಾಲ ಇರುತ್ತದೆ. ಇನ್ನಷ್ಟು ಉತ್ಕೃಷ್ಟ ಸಾಹಿತ್ಯ ರಚನೆಯಾಗಲಿ ಎಂದು ಸಿಎಂ ಆಶಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ ಮಾಧುಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ವೈನ್ ತಯಾರಿಕೆಗೆ ಉತ್ತೇಜನ, ರಫ್ತು ಹೆಚ್ಚಿಸಲು ಕ್ರಮ: ಸಿಎಂ ಬೊಮ್ಮಾಯಿ