ಬೆಂಗಳೂರು : ಪ್ರಕರಣವೇ ದಾಖಲಾಗದಂತೆ ಸಖತ್ ಐಡಿಯಾ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಖದೀಮನನ್ನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಎಂಬಾತ ಬಂಧಿತ ಆರೋಪಿ. ಮೊದಲು ಆನ್‌ಲೈನ್‌ನಲ್ಲಿ ಬೈಕ್ ಮಾರಾಟದ ಜಾಹೀರಾತು ನೋಡುತ್ತಿದ್ದ ಆರೋಪಿ ತಾನು ಖರೀದಿಗೆ ಸಿದ್ಧವಿರುವುದಾಗಿ ಮಾಲೀಕರನ್ನ ಸಂಪರ್ಕಿಸಿ ಬೈಕ್ ಇರುವ ಜಾಗಕ್ಕೆ ಹೋಗುತ್ತಿದ್ದ. ಬಳಿಕ ಟೆಸ್ಟ್ ಡ್ರೈವ್ ಮಾಡುತ್ತೇನೆ ಎಂದು ಬೈಕ್ ಸಮೇತ ಪರಾರಿಯಾಗುತ್ತಿದ್ದ.
ಬಳಿಕ ಅದೇ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್ ಮಾರಾಟದ ಜಾಹೀರಾತು ನೀಡಿರುವವರನ್ನ ಟಾರ್ಗೆಟ್ ಮಾಡುತ್ತಿದ್ದ. ಯಾವುದೋ ಒಂದು ವಿಳಾಸ ನೀಡಿ ಮೊಬೈಲ್ ಮಾಲೀಕರನ್ನ ಕರೆಸಿಕೊಂಡು 'ದುಡ್ಡಿಲ್ಲ 10 ನಿಮಿಷ ಬರ್ತೀನಿ' ಎಂದು ಹೇಳಿ ಕದ್ದ ಬೈಕ್ ಅವರ ಕೈಗಿತ್ತು ಎಸ್ಕೇಪ್ ಆಗುತ್ತಿದ್ದ.
ಇತ್ತ ಮೊಬೈಲ್ ಹೋದರೆ ಹೋಗಲಿ ಬೈಕ್ ಕೊಟ್ಟ ಎಂದು ಮೊಬೈಲ್ ಮಾಲೀಕರು ದೂರು ನೀಡದೇ ಸುಮ್ಮನಾಗುತ್ತಿದ್ದರು. ಆದರೆ, ಇದೇ ಸಮಯಕ್ಕೆ ಬೈಕ್ ಮಾಲೀಕರಿಗೆ ಕರೆ ಮಾಡಿ ನಿಮ್ಮ ಬೈಕ್ ಇಂಥವರ ಬಳಿ ಇದೆ ಎಂದು ಹೇಳಿ ಮೊಬೈಲ್ ಮಾಲೀಕರ ನಂಬರ್ ಕೊಟ್ಟು ಆರೋಪಿ ಸುಮ್ಮನಾಗುತ್ತಿದ್ದನಂತೆ.
ಬೈಕ್ ಮಾಲೀಕರು ಮೊಬೈಲ್ ಮಾಲೀಕರಿಗೆ ಒಂದಷ್ಟು ಹಣ ಕೊಟ್ಟು ತಮ್ಮ ಬೈಕ್ ಬಿಡಿಸಿಕೊಳುತ್ತಿದ್ದರು. ಈ ಮಧ್ಯೆ ಮೊಬೈಲ್ ಬೇರೆಡೆ ಮಾರಿ ಬಂದಿದ್ದ ಹಣದಿಂದ ಆರೋಪಿ ಮೋಜು, ಮಸ್ತಿ ಮಾಡುತ್ತಿದ್ದನಂತೆ. ಇತ್ತೀಚೆಗೆ ಬೈಕ್ ಮಾಲೀಕರೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ ಉಗ್ರರ ಗುಂಡಿನ ದಾಳಿ: ಇಬ್ಬರು ನಾಗರಿಕರಿಗೆ ಗಾಯ