ಬೆಂಗಳೂರು : ಶಿಕ್ಷಣ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಇಬ್ಬರು ಯುವಕರು ದೇಶಾದ್ಯಂತ 245 ದಿನಗಳ ಕಾಲ ಕೈಗೊಂಡಿದ್ದ ಸೈಕಲ್ ಜಾಥಾ ಯಶಸ್ವಿಯಾಗಿದ್ದು, ಕೋಲಾರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಯುವಕರನ್ನು ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಬರಮಾಡಿಕೊಂಡರು.
ಬಿ.ಕಾಂ ಪದವೀಧರರಾದ ಎಂ.ಧನುಷ್ (23) ಮತ್ತು ವೈ.ಬಿ. ಹೇಮಂತ್ (23) ಅವರು 245 ದಿನಗಳಲ್ಲಿ 29 ರಾಜ್ಯ ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಕಲ್ ಜಾಥಾ ಕೈಗೊಂಡು ಶಿಕ್ಷಣ ಮತ್ತು ಪರಿಸರ ಜಾಗೃತಿ ಮೂಡಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಈ ಯುವಕರು ಈಗಾಗಲೇ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ಪರಿಸರ ಸಂರಕ್ಷಣೆ, ಕಡ್ಡಾಯ ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವೈಟ್ ಫೀಲ್ಡ್ ರೋಟರಿ ಸಂಸ್ಥೆ, ಶಿಶು ಮಂದಿರ ಸಂಸ್ಥೆಯ ರೋಟ್ಯಾಕ್ಟರ್ ಕ್ಲಬ್ ಸಹಾಯದಿಂದ ಇಬ್ಬರು ಯುವಕರು ಕಳೆದ 8 ತಿಂಗಳ ಹಿಂದೆ ಸೈಕಲ್ ಜಾಥಾ ಆರಂಭಿಸಿದ್ದರು. ಇದೀಗ ಮಾ .12 ರ ಶನಿವಾರ ಕೋಲಾರ ಜಿಲ್ಲೆಯ ಮುಖಾಂತರ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ.
ಈ ಯುವಕರು ಬೆಂಗಳೂರಿನ ಮಹದೇವಪುರ ಕ್ಷೇತ್ರದ ಕಾಡುಗೋಡಿಯರಾಗಿದ್ದು ಕಳೆದ ಜುಲೈ 11 ರಂದು ಬೆಂಗಳೂರಿನ ವಿಧಾನಸೌಧದ ಎದುರು ಜಾಥಾ ಆರಂಭಿಸಿದ್ದರು. ಯುವಕರು ಈವರೆಗೆ 29 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳನ್ನು ಸುತ್ತಿ ಬಂದಿದ್ದಾರೆ. ಶಿಕ್ಷಣ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 4 ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಜ್ಯ ಕ್ರೀಡಾ ಸಚಿವರು, ಕಂದಾಯ ಸಚಿವರು, ಸಂಸದರು, ಅನೇಕ ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಸೈಕಲ್ ಜಾಥದ ಉದ್ದೇಶವನ್ನು ತಿಳಿಸಿಕೊಟ್ಟಿದ್ದಾರೆ. ಯುವಕರು ಈ ರೀತಿ ಕೆಲಸಗಳನ್ನು ಮಾಡುತ್ತಿರುವುದು ನಿಜಕ್ಕೂ ಸಂತಸ ತಂದಿದ್ದಾರೆ.
ದಾಖಲೆಯನ್ನು ಅಪ್ಪುವಿಗೆ ಅರ್ಪಿಸಿದ ಯುವಕರು :
ಸೈಕ್ಲಿಂಗ್ ಪಟು ಧನುಷ್ ಮಾತನಾಡಿ, ಸೈಕ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇತ್ತು. ಕಳೆದ ಜುಲೈನಲ್ಲಿ ಪ್ರಯಾಣ ಬೆಳೆಸಿದ್ದು ಸುಮಾರು ಎಂಟು ತಿಂಗಳ ಕಾಲ ಪ್ರತಿ ದಿನ 120-150 ಕಿ.ಮೀ ದೂರ ಮಳೆ ಗಾಳಿ,ಚಳಿ,ಹಿಮ ಎಲ್ಲವನ್ನು ಎದುರಿಸಿ ದಾಖಲೆ ಮಾಡಿದ್ದೇವೆ ಎಂದರು. ನಾವು ಈ ದಾಖಲೆಯನ್ನು ನಮ್ಮ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸುತ್ತೇವೆ. ನಾವು ಜಾಥ ಮುಗಿಸಿ ನಂತರ ಅವರನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ ನಾವು ಒಡಿಶಾದಲ್ಲಿದ್ದಾಗ ಪುನೀತ್ ರಾಜ್‍ಕುಮಾರ್ ಅವರು ವಿಧಿವಶರಾಗಿದ್ದು ತಿಳಿದು ಆ ದಿನ ನಾವು ಸೈಕ್ಲಿಂಗ್ ಮಾಡಲಿಲ್ಲ ಎಂದರು. ನಮ್ಮ ಈ ದಾಖಲೆಯನ್ನು ಅಪ್ಪು ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರೋಟರಿ ಡಿಸ್ಟಿ ಗವರ್ನರ್ ಫಜಲ್ ಮಹಮ್ಮದ್ ಮಾತನಾಡಿ, ಒಂದು ದಿನ ಮನೆಯಿಂದ ಹೊರಗೆ ಹೋದರೆ ಅವರ ಪೋಷಕರು ಆತಂಕಕ್ಕೆ ಒಳಗಾಗುವುದು ಸಹಜ . ಅಲ್ಲದೆ ಅವರು ಉಳಿಯುವುದೆಲ್ಲಿ , ಅವರಿಗೆ ಊಟ , ತಿಂಡಿ , ನಿದ್ದೆ ಇತ್ಯಾದಿಗಳ ಬಗ್ಗೆ ಆತಂಕ ಮೂಡುತ್ತದೆ . ಆದರೆ ಧನುಷ್ ಮತ್ತು ಹೇಮಂತ್ ಬರೋಬ್ಬರಿ 240 ದಿನ ಮನೆಯಿಂದ ಹೊರಗಿದ್ದುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಅದೂ ಸೈಕಲ್ ತುಳಿಯುತ್ತಾ ಸಾಗಿದ್ದುದು ಮತ್ತಷ್ಟು ಕಷ್ಟದ ಕೆಲಸ. ರೋಟರಿಯಿಂದ ಹಮ್ಮಿಕೊಂಡಿರುವ ಮೂಲ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕೋವಿಡ್ ನಂತಹ ಸಂದರ್ಭದಲ್ಲಿ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಒಂದು ಬಹುಮುಖ್ಯ ಉದ್ದೇಶವನ್ನು ಇಟ್ಟುಕೊಂಡು ದೇಶ ಪರ್ಯಟನೆ ಮಾಡಿದ್ದು ಖುಷಿಯ ಸಂಗತಿ. ನಮ್ಮ ಕ್ಲಬ್ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿತ್ತು. ಇಂದು ಇವರು ಜಾಥಾ ಪೂರೈಸಿ ವಾಪಸಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಓದಿ : ಪಂಜಾಬ್ನಲ್ಲಿ 'ಆಪ್' ಭರ್ಜರಿ ರೋಡ್ ಶೋ.. 'ಸಿಎಂ' ಮಾನ್ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ