ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಲವು ನಿರ್ಬಂಧಗಳನ್ನು ವಿಧಿಸಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಲ್ಲೇನಿದೆ? :
9 ಸೂತ್ರಗಳನ್ನು ಸರ್ಕಾರದ ಮುಂದೆ ಇಟ್ಟಿರುವ ತಜ್ಞರು, ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಿಫಾರಸು ಮಾಡಿದ್ದಾರೆ. ಜೊತೆಗೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ತುಮಕೂರು ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಗೆ ತರುವಂತೆ ಸೂಚನೆ ನೀಡಲಾಗಿದ್ದು, 21 ದಿನ ಯಾವ್ಯಾವ ಚಟುವಟಿಕೆಗಳು ಬಂದ್ ಮಾಡಬೇಕು ಎನ್ನುವುದರ ಕುರಿತು ತಿಳಿಸಿದ್ದಾರೆ.
ಮುಂದಿನ 21 ದಿನ ಯಾವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು?:
- ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಬಿಟ್ಟು ಉಳಿದ ಎಲ್ಲಾ ತರಗತಿಗಳನ್ನು ಮೂರು ವಾರ ಬಂದ್ ಮಾಡಿ. (ಡಿಗ್ರಿ, ಪಿಜಿ ಕೂಡ ಸೇರಿದಂತೆ)
- ಅಪಾರ್ಟಮೆಂಟ್ಗಳ ಪಾರ್ಟಿ ಹಾಲ್, ಈಜುಕೊಳ, ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ ಬಂದ್ ಮಾಡಬೇಕು.
- 8 ಜಿಲ್ಲೆಗಳಲ್ಲಿ ಜಿಮ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು.
- ಸಿನಿಮಾ ಹಾಲ್ಗಳಲ್ಲಿ ಶೇ 50 ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ಕೊಡಬೇಕು.
- ಮುಚ್ಚಿದ ಪ್ರದೇಶದಲ್ಲಿ ಮದುವೆಗೆ ಕೇವಲ 100 ಜನ, ತೆರೆದ ಪ್ರದೇಶವಾದರೆ 200 ಜನಕ್ಕೆ ಅವಕಾಶ, ಶವ ಸಂಸ್ಕಾರಕ್ಕೆ ಕೇವಲ 20 ಜನರಿಗೆ ಮಾತ್ರ ಅವಕಾಶ.
- ಸಾರ್ವಜನಿಕ ಸಾರಿಗೆಯಲ್ಲಿ ಇರುವಷ್ಟು ಸೀಟು ಮಾತ್ರ ಭರ್ತಿ ಮಾಡಬೇಕು, ಕಡ್ಡಾಯವಾಗಿ ಪ್ರಯಾಣಿಕರು ಮಾಸ್ಕ್ ಹಾಕಿರಲೇಬೇಕು.
- ಮಾಲ್ ಹಾಗೂ ಮಾಲ್ ಒಳಗಿನ ಶಾಪ್ಗಳಲ್ಲಿ ಜನ ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೆ ಮಾಲ್ ಮಾಲೀಕರು ಅಂಗಡಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಿ.
- ರಾಜ್ಯದಲ್ಲಿ ಮೂರು ವಾರಗಳ ಕಾಲ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಬೇಕು.
- SARI ಹಾಗೂ ILI ಕೇಸ್ಗಳನ್ನ ಪತ್ತೆ ಮಾಡಿ RAT ಟೆಸ್ಟ್ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಮನೆ ಮನೆಗೆ ತೆರಳಿ SARI ಹಾಗೂ ILI ಕೇಸ್ಗಳನ್ನ ಪತ್ತೆಹಚ್ಚುವುದು.