ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿದ್ದ ಜಿಹಾದಿ ಗ್ಯಾಂಗ್ ಸದಸ್ಯರ ವಿಚಾರಣೆಯ ಸಂಪೂರ್ಣ ಹೊಣೆಯನ್ನ ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ರಾಜ್ಯ ಸರ್ಕಾರ ವಹಿಸಿದೆ.
ಪ್ರಕರಣದ ತನಿಖೆಯ ಹೊಣೆಯನ್ನು ಇಲ್ಲಿಯವರೆಗೆ ಸಿಸಿಬಿಯ ಭಯೋತ್ಪಾದಕ ನಿಗ್ರಹ ದಳ ನಡೆಸುತ್ತಿತ್ತು. ಸದ್ಯ, ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನ ಎನ್ಐಎ ನಡೆಸಲಿದೆ. ಜಿಹಾದಿ ಸಂಘಟನೆಯ ಕಮಾಂಡರ್ ಎನ್ನಲಾದ ಮೆಹಬೂಬ್ ಪಾಷಾ ಹಾಗೂ ಆತನ ಸಹಚರರು ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದರು. ಈ ಗ್ಯಾಂಗ್ ತಂಡದ ಪ್ರಮುಖ ವ್ಯಕ್ತಿ ಮೆಹಬೂಬ್ ಪಾಷ, ಜಿಹಾದಿಗೆ ಬಹಳಷ್ಟು ಮಂದಿಯನ್ನ ಸೇರಿಸುವ ಕಾರ್ಯ ಮಾಡಿ ವಿಧ್ವಂಸಕ ಕೃತ್ಯವೆಸಗುವಂತಹ ತರಬೇತಿ ನೀಡ್ತಿದ್ದ. ಅಲ್ಲದೆ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಇವರ ಜಾಲ ವಿಸ್ತರಿಸಿತ್ತು ಎಂದು ತಿಳಿದುಬಂದಿದೆ.
ಈ ಕಿರಾತಕರ ಕೃತ್ಯದ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಸುದ್ದುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಮೆಹಬೂಬ್ ಪಾಷಾನನ್ನ ಮೊದಲು ಬಂಧಿಸಿ, ನಂತರ ಇತನ 15 ಜನ ಸಹಚರರನ್ನ ಬಂಧಿಸಿದ್ದರು.