ಬೆಂಗಳೂರು: ಉಪಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗಾಲಾಗಿರುವ ಜೆಡಿಎಸ್ ವರಿಷ್ಠರು ಪಕ್ಷ ಬಲವರ್ಧನೆಗೆ ಮುಂದಾಗಿದ್ದಾರೆ.
ಉಪಚುನಾವಣೆ ಫಲಿತಾಂಶ ಹೊರಬಿದ್ದಾಗ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿತ್ತು. ಇದರಿಂದ ಕಂಗಾಲಾದ ಜೆಡಿಎಸ್ ನಾಯಕರು ಮೌನಕ್ಕೆ ಶರಣಾಗಿದ್ದರು. ಇನ್ನು ಜೆಡಿಎಸ್ ಶಾಸಕರಂತೂ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದಾರೆ. ಫಲಿತಾಂಶ ಬಂದಾಗಿನಿಂದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ನಿವಾಸದಿಂದ ಹೊರ ಹೋಗಿರಲಿಲ್ಲ. ನಿನ್ನೆ ಮಾತ್ರ ತಮ್ಮ ಪುತ್ರ, ಮಾಜಿ ಸಿಎಂ ಹೆಚ್. ಕುಮಾರಸ್ವಾಮಿ ಅವರ ಷಷ್ಠಿಪೂರ್ತಿ ಪೂಜಾ ಕಾರ್ಯಕ್ರಮದಲ್ಲಿ ದೇವೇಗೌಡರು ಪಾಲ್ಗೊಂಡಿದ್ದರು.
ಕಳೆದ ಐದು ದಿನಗಳಿಂದ ಮನೆಯಲ್ಲೇ ಕುಳಿತ ಗೌಡರು ಪಕ್ಷದ ಬಲವರ್ಧನೆಗೆ ಹೊಸ ಪ್ಲಾನ್ ರೂಪಿಸಿದ್ದಾರೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲ. ಅದೇ ರೀತಿ ರಾಜ್ಯದ ಇತರೆ ಕಡೆಗೂ ಹೆಚ್ಚು ಗಮನಹರಿಸಿ ಪಕ್ಷವನ್ನು ಬಲಪಡಿಸಲು ಪ್ರಯತ್ನ ಮಾಡುತ್ತಿರುವ ವರಿಷ್ಠರು, ಇದಕ್ಕಾಗಿ ಯುವ ನಾಯಕ, ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮುಂದಕ್ಕೆ ಬಿಡಲು ಮುಂದಾಗಿದ್ದಾರೆ. ಹಾಗಾಗಿ, ಪಕ್ಷದ ಸಂಘಟನೆಗಾಗಿ ಪ್ರಜ್ವಲ್ ರೇವಣ್ಣರಿಗೆ ಉತ್ತರ ಕರ್ನಾಟಕ ಜಿಲ್ಲೆಗಳ ಜವಾಬ್ದಾರಿ ನೀಡಲು ದೇವೇಗೌಡರು ಚಿಂತನೆ ನಡೆಸಿದ್ದಾರೆ. ಸಂಕ್ರಾತಿ ನಂತರ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಪ್ರಜ್ವಲ್ ರೇವಣ್ಣ, ಪ್ರತಿಯೊಂದು ಜಿಲ್ಲೆಗೂ ತೆರಳಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ, ಪಕ್ಷ ಬಲವರ್ಧನೆಗೆ ತೊಡಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಷ್ಟಾಗಿ ಪಕ್ಷ ಸಂಘಟನೆಯಲ್ಲಿ ಆಸಕ್ತಿ ತೋರದಿರುವುದರಿಂದ ಯುವಕರು ಬೇರೆ ಪಕ್ಷಗಳ ಕಡೆ ವಾಲುತ್ತಿದ್ದಾರೆ. ಉಪಚುನಾವಣೆ ನಂತರ ಜೆಡಿಎಸ್ ನ ಯುವ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಹೀಗೆ ಮುಂದುವರೆದರೆ ಯುವಕರು ಪಕ್ಷ ಬಿಟ್ಟು ಹೋಗುವ ಆತಂಕ ವರಿಷ್ಠರಿಗೆ ಎದುರಾಗಿದ್ದು, ಇದೇ ಕಾರಣಕ್ಕೆ ಪ್ರಜ್ವಲ್ ರೇವಣ್ಣರನ್ನು ಬಳಸಿಕೊಳ್ಳಲು ಗೌಡರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.