ಬೆಂಗಳೂರು: ಕೋವಿಡ್ ಉಲ್ಬಣಿಸುತ್ತಿರುವ ಹಿನ್ನೆಲೆ ಇದೇ ಏಪ್ರಿಲ್ 27ರಂದು ರಾಜ್ಯದ 9 ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯನ್ನು ಮುಂದೂಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ಸಿ. ರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ವಕೀಲರು ವಾದಿಸಿ, ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದು, ಚುನಾವಣೆ ಮುಂದೂಡಲು ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಚುನಾವಣೆಯನ್ನು ಯಾವ ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಮುಂದೂಡಬೇಕು ಎಂಬುದನ್ನು ತಿಳಿಸಿ ಎಂದಿತು. ಇದಕ್ಕೆ ಅರ್ಜಿದಾರರ ಪರ ವಕೀಲರು ಪರಿಸ್ಥಿತಿ ಅವಲೋಕಿಸಿ ಮುಂದೂಡುವುದು ಸೂಕ್ತ ಎಂದರು. ವಾದ ಒಪ್ಪದ ಪೀಠ, ಕೋವಿಡ್ ಮೊದಲನೇ ಅಲೆ ಆರಂಭ ಆದಾಗಿನಿಂದಲೂ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ರಾಜ್ಯದಲ್ಲಿಯೂ ವಿಧಾನಸಭೆ, ಲೋಕಸಭೆಗಳಿಗೆ ಉಪಚುನಾವಣೆ ನಡೆದಿದೆ. ಹೀಗಾಗಿ ಕೋವಿಡ್ ಕಾರಣಕ್ಕೆ ಚುನಾವಣೆ ಮುಂದೂಡವುದು ಸರಿ ಎನ್ನಿಸದು ಎಂದು ಅಭಿಪ್ರಾಯಪಟ್ಟಿತು.
ಅಲ್ಲದೇ, ಸಂವಿಧಾನದ ವಿಧಿ 243 (ಯು) ಪ್ರಕಾರ ಅವಧಿ ಮುಗಿಯುವ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು. ಇನ್ನು ಯಾವಾಗ ಚುನಾವಣೆ ನಡೆಸಬೇಕು ಎಂಬ ವಿಚಾರವನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ. ಈಗಾಗಲೇ ಚುನಾವಣೆಗೆ ಎಲ್ಲ ಸಿದ್ದತೆ ಮಾಡಿಕೊಂಡಿದ್ದು, ಮತ ಚಲಾವಣೆಯಷ್ಟೇ ಬಾಕಿ ಇದೆ. ಆದ್ದರಿಂದ, ಈ ಹಂತದಲ್ಲಿ ಅರ್ಜಿಯನ್ನು ಪರಿಗಣಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿತು.
ಪ್ರಕರಣದ ಹಿನ್ನೆಲೆ -
ರಾಜ್ಯದಲ್ಲಿ ಅವಧಿ ಮುಗಿದರೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದ ರಾಜ್ಯ ಸರ್ಕಾರದ ಕ್ರಮಕ್ಕೆ ಬ್ರೇಕ್ ಹಾಕಲು ಮತ್ತು ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಲು ಅಗತ್ಯ ನಿರ್ದೇಶನಗಳನ್ನು ನೀಡುವ ಉದ್ದೇಶದಿಂದ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಎಎಪಿ ಮುಖಂಡ ಪೃಥ್ವಿ ಸಿ ರೆಡ್ಡಿ ಚುನಾವಣೆಗಳನ್ನು ಮುಂದೂಡಲು ಕೋರಿದ್ದರು.
ಅರ್ಜಿಯಲ್ಲಿ ರಾಜ್ಯಾದ್ಯಂತ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರದ ಬಳಿ ಸೂಕ್ತ ವ್ಯವಸ್ಥೆಯೂ ಇಲ್ಲ. ಜನರಿಗೆ ಲಸಿಕೆ, ಬೆಡ್, ಆಕ್ಸಿಜೆನ್ ಲಭ್ಯವಾಗುತ್ತಿಲ್ಲ. ಕೋವಿಡ್ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ಹಿಂದೆ ಉಪಚುನಾವಣೆ ನಡೆದ ಕ್ಷೇತ್ರಗಳಲ್ಲಿ ಸೋಂಕು ತೀವ್ರವಾಗಿ ಹಬ್ಬಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಆದ್ದರಿಂದ ಚುನಾವಣೆ ನಡೆಸದಂತೆ ಹಾಗೂ ಮುಂದೂಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.
ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳು -
ರಾಮನಗರ - ನಗರಸಭೆ
ಚನ್ನಪಟ್ಟಣ - ನಗರಸಭೆ
ಬೀದರ್ - ನಗರಸಭೆ
ಮಡಿಕೇರಿ - ನಗರಸಭೆ
ಭದ್ರಾವತಿ - ನಗರಸಭೆ
ವಿಜಯಪುರ -ಪುರಸಭೆ
ಬೇಲೂರು - ಪುರಸಭೆ
ಗುಡಿಬಂಡೆ - ಪಟ್ಟಣ ಪಂಚಾಯಿತಿ
ತೀರ್ಥಹಳ್ಳಿ - ಪಟ್ಟಣ ಪಂಚಾಯಿತಿ