ಬೆಂಗಳೂರು: ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಗೊಂದಲದಲ್ಲಿದೆ. ಆಕ್ಸಿಜನ್, ವೆಂಟಿಲೇಟರ್ ಕೊರತೆ ಇದೆ. ಇದರ ಬಗ್ಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಕರೆದಿದ್ದ ಸಭೆಯಲ್ಲಿ ಭಾಗಿವಹಿಸಿ ನಂತರ ಮಾತನಾಡಿದ ಅವರು, ಕೊರೊನಾ ಲಸಿಕೆ ಹಾಕಿಸಿಕೊಂಡ ಬಳಿಕವೂ ಜನ ಸಾಯ್ತಿದ್ದಾರೆ. ಇದಕ್ಕೇನು ಪರಿಹಾರ?. ಲಾಕ್ಡೌನ್ ಪ್ರಯೋಜನ ಇಲ್ಲ. ಅದರ ಬದಲು 144 ಸೆಕ್ಷನ್ ಜಾರಿ ಮಾಡಿ ನಾಲ್ಕು ಜನಕ್ಕಿಂತ ಹೆಚ್ಚು ಸೇರದಂತೆ ನೋಡಿಕೊಳ್ಳಬೇಕು. ಸತ್ತ ಮೇಲಾದರೂ ಮಾರ್ಯದೆಯಿಂದ ಅಂತ್ಯ ಸಂಸ್ಕಾರ ಮಾಡಲು ಹೇಳಿದ್ದೇವೆ ಎಂದು ತಿಳಿಸಿದರು.
ವ್ಯಾಕ್ಸಿನ್ ಬಗ್ಗೆ ಗೊಂದಲ ಇದೆ. ಪಾಸಿಟಿವ್ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗಬೇಕು. ತಪ್ಪಾಗಿದ್ರೆ ತಪ್ಪನ್ನ ಒಪ್ಪಿಕೊಳ್ಳಿ. ಎಲ್ಲರೂ ಹೋರಾಟ ಮಾಡೋಣ ಎಂದು ಹೇಳಿದ್ದೇವೆ. ಕಲ್ಯಾಣ ಮಂಟಪಗಳನ್ನು ತೆಗೆದುಕೊಂಡು ಆಸ್ಪತ್ರೆಯಾಗಿ ಪರಿವರ್ತಿಸಿ. ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಸಲಹೆ ಕೊಟ್ಟಿದ್ದಾರೆ ಎಂದರು.
144 ಸೆಕ್ಷನ್ 24 ಗಂಟೆಗಳ ಕಾಲ ಮಾಡಬೇಕು ಎಂದಿದ್ದೇವೆ. ನಿಷೇಧಾಜ್ಞೆ ಮಾಡಿ ಆದರೆ, ಪೊಲೀಸರು ಹೆಚ್ಚಾಗಿ ಜನರನ್ನು ಹೊಡಿಬೇಡಿ. ಕೊರೊನಾ ಇದೆ ಅಂದರೆ ಅವರಿಗೆ ಭಯ ಇರಬೇಕು. ಧಾರ್ಮಿಕ ಚಟುವಟಿಕೆ ಇದ್ದರೆ ಮಸೀದಿಯಲ್ಲಿ ಮೂರು ಅಡಿ ಇರಿ. ಇಲ್ಲ ಅಂದರೆ ಹೊರಗೆ ಹಾಕಿ ಎಂದಿದ್ದೇವೆ ಎಂದು ಹೇಳಿದರು.