ಬೆಂಗಳೂರು: ಅನರ್ಹ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸಿದ್ಧತೆ ನಡೆಸಿ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಇಂದು ಇಂದು ಕೋರ್ ಕಮಿಟಿ ಸಭೆ ನಡೆಯಿತು. ನಳೀನ್ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಈಶ್ವರಪ್ಪ, ಸಿ.ಟಿ ರವಿ, ಜಗದೀಶ್ ಶೆಟ್ಟರ್, ಸಿಎಂ ಉದಾಸಿ, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಕಾಯ್ದುಕೊಳ್ಳುವುದು, ಪದಾಧಿಕಾರಿಗಳ ನೇಮಕ, ಉಪ ಚುನಾವಣೆಗೆ ಸಿದ್ಧತೆ, ಪರಿಷತ್ ಚುನಾವಣೆ ತಯಾರಿ, ಸದಸ್ಯತಾ ಅಭಿಯಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಭೆಯಲ್ಲಿ ಮೂರು ವಿಚಾರಗಳು ಚರ್ಚೆಯಾಗಿವೆ. 17 ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಪಕ್ಷವನ್ನು ಸನ್ನದ್ಧಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಅನರ್ಹ ಶಾಸಕರು ಕೋರ್ಟ್ನಲ್ಲಿ ಹೋರಾಟ ಮುಂದುವರಿಸಿದ್ದರೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಆರಂಭವಾಗುತ್ತದೆ. ಆದರೆ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರಾಗುತ್ತಾರೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ ಎಂದರು.
ಮುಂದಿನ ಜೂನ್ನಲ್ಲಿ ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳ ಚುನಾವಣಾ ಸಿದ್ಧತಾ ಸಭೆಗಳ ಬಗ್ಗೆ ಚರ್ಚೆಯಾಗಿದೆ. ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯತೆ ಬಗ್ಗೆಯೂ ಚರ್ಚೆಯಾಗಿದೆ. ಸಂಘಟನಾತ್ಮಕ ಚಟುವಟಿಕೆಗಳು ನಡೆಯುತ್ತಿವೆ. ಸದಸ್ಯತ್ವ ಅಭಿಯಾನ ಮತ್ತು ಸಕ್ರಿಯ ಸದಸ್ಯತ್ವ ಬಗ್ಗೆ ಚರ್ಚಿಸಲಾಗಿದೆ. ಈ ವರ್ಷ ಸದಸ್ಯರನ್ನು 50 ಲಕ್ಷಕ್ಕೆ ತಲುಪಿಸುವ ಪ್ರಯತ್ನದ ಬಗ್ಗೆ ಚರ್ಚಿಸಲಾಗಿದೆ. ಸೆ. 8ರಂದು ರಾಜ್ಯದಲ್ಲಿ ಸಕ್ರಿಯ ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ತಿಳಿಸಲಾಗಿದ್ದು, ಒಂದು ಲಕ್ಷ ಸಕ್ರಿಯ ಸದಸ್ಯರನ್ನು ನೋಂದಣಿ ಮಾಡುತ್ತೇವೆ. ನಂತರ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಪ್ರವಾಸ ಮಾಡಲಿದ್ದಾರೆ. ಜೊತೆಗೆ ಜನೋಪಯೋಗಿ ಕೆಲಸ ಆಗಬೇಕು. ಪ್ರವಾಹ ಪೀಡಿತ ಪ್ರದೇಶದ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ, ಪಕ್ಷ ಪೂರ್ಣ ಬೆಂಬಲ ಕೊಡಬೇಕು ಎಂದು ತೀರ್ಮಾನವಾಗಿದೆ ಎಂದು ಲಿಂಬಾವಳಿ ಮಾಹಿತಿ ನೀಡಿದ್ರು.
ಇನ್ನು, ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ನಂತರ ನಡೆದ ಮೊದಲ ಕೋರ್ ಕಮಿಟಿ ಸಭೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಗೈರಾಗಿದ್ದರು.