ಬೆಂಗಳೂರು: ಇತ್ತೀಚಿಗೆ ಕೇಂದ್ರ ಸರ್ಕಾರ ಜವಳಿ ಉತ್ಪನ್ನಗಳಿಗೆ ಶೇ.5ರಷ್ಟಿದ್ದ ಜಿಎಸ್ಟಿ ದರವನ್ನು 12% ಹೆಚ್ಚಳ ಮಾಡಿದ್ದಕ್ಕೆ ಬಟ್ಟೆ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ತೆರಿಗೆ ಇಳಿಸಲು ಮನವಿ ಮಾಡಿದ್ದಾರೆ.
ಆಹಾರ, ಉಡುಪು ಹಾಗೂ ಸೂರು ಮನುಷ್ಯನಿಗೆ ಅತ್ಯಗತ್ಯ. ಬಡವರಿಂದ ಶ್ರೀಮಂತ ವರ್ಗದವರು ಬಟ್ಟೆ ತೊಡಲೇಬೇಕು. ಸೇಲ್ಸ್ ತೆರಿಗೆ ಇದ್ದ ಸಂದರ್ಭದಲ್ಲಿ ಬಟ್ಟೆಗಳನ್ನು ತೆರಿಗೆರಹಿತವಾಗಿ ಇಟ್ಟಿದ್ದ ಸರ್ಕಾರ ಜಿಎಸ್ಟಿ ಜಾರಿಯಿಂದ 5% ತೆರಿಗೆ ವಿಧಿಸಿತ್ತು. ಇದಕ್ಕೆ ನಮ್ಮ ಆಕ್ಷೇಪಣೆಯನ್ನು ವಿತ್ತ ಸಚಿವರಿಗೆ ತಿಳಿಸಿದ್ವಿ. ಈಗ 12% ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಸಗಟು ಜವಳಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದರು.
ಇನ್ನು ಜಿಎಸ್ಟಿ ತೆರಿಗೆ ವಿನಾಯಿತಿ ಕೋರಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಜವಳಿ ವರ್ತಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತಿದ್ದಾರೆ. ಲಾಕ್‌ಡೌನ್ ನಿಂದ ನೆಲಕಚ್ಚಿದ ಈ ಉದ್ಯಮ ಈಗ ಸುಧಾರಣೆಯತ್ತ ಮುಖ ಮಾಡುತ್ತಿದೆ. ತೆರಿಗೆ ಹೆಚ್ಚಳದಿಂದ ವ್ಯಾಪಾರದಲ್ಲಿ ಮತ್ತೆ ಇಳಿಕೆ ಆಗುವ ಸಾಧ್ಯತೆ ಇದೆ ಅನ್ನೋದು ವರ್ತಕರ ಆತಂಕ.