ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿ ರಾಜ್ಯಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಳಗ್ಗೆಯಿಂದ ಸಂಜೆವರೆಗೆ ನಡೆದ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ಕೆಲವು ಪ್ರಮುಖ ಅಂಶಗಳ ಕುರಿತು ಪ್ರಧಾನ ಮಂತ್ರಿ ಅವರ ಗಮನ ಸೆಳೆಯಲಾಯಿತು. ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ ರಾಜ್ಯದ ಹಣಕಾಸು ಪರಿಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫಿಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದ ಮೊದಲಾದ ಉಪಕ್ರಮಗಳ ಕುರಿತು ವಿವರಿಸಲಾಯಿತು.
ಇಡೀ ದೇಶದಲ್ಲೇ ರಾಜ್ಯದಲ್ಲಿ ನಿರುದ್ಯೋಗ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಶೇಕಡಾ 3.6 ರಷ್ಟಿದೆ. ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತು ಕಾರ್ಯಪಡೆ ರಚಿಸಲಾಗಿದ್ದು, ಪೌಷ್ಟಿಕತೆಯ ಮಟ್ಟ ಹೆಚ್ಚಿಸಲು ಸಿರಿ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ. ಆಯಾ ಪ್ರಾದೇಶಿಕ ಸಂಪನ್ಮೂಲಗಳಿಗೆ ಅನುಗುಣವಾಗಿ ರೈತರಿಗೆ ಬೆಳೆ ಬೆಳೆಯಲು ರೈತ ಸಂಪರ್ಕ ಕೇಂದ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಇದರೊಂದಿಗೆ ಸ್ಥಳೀಯ ಜಾನುವಾರು ತಳಿಗಳನ್ನು ಸಂರಕ್ಷಿಸಲು ಸಹ ಉದ್ದೇಶಿಸಲಾಗಿದೆ ಎಂದು ವಿವರಿಸಲಾಯಿತು.
ಆತ್ಮನಿರ್ಭರ್ ಯೋಜನೆಯಡಿ ಹೆಚ್ಚುವರಿಯಾಗಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಆನ್ಲೈನ್ ಮಾರುಕಟ್ಟೆ ಹಾಗೂ ಪೂರಕ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ. ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದ 114 ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ. ಸೇವಾ ಸಿಂಧು ಯೋಜನೆಯಡಿ ಜನತೆಗೆ 750 ಸೇವೆಗಳನ್ನು ಕಾಗದರಹಿತವಾಗಿ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ 3,409 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಆಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 2,753 ಕೋಟಿ ರೂ. ವೆಚ್ಚದಲ್ಲಿ 13 ಲಕ್ಷ ಜನರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 4,607 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಆತ್ಮನಿರ್ಭರ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಪರ್ - ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ. ಆಯುಷ್ ಪದ್ಧತಿಗೆ ಉತ್ತೇಜನ ನೀಡುವ ಸಮಗ್ರ ಸಾರ್ವಜನಿಕ ಆರೋಗ್ಯ ನೀತಿಯನ್ನು ಜಾರಿಗೆ ತರಲಾಗಿದೆ. ಪೌಷ್ಟಿಕತೆ ಕಡಿಮೆ ಇರುವ ರಾಜ್ಯದ 16 ಜಿಲ್ಲೆಗಳ 67 ತಾಲೂಕುಗಳಲ್ಲಿ ಪೌಷ್ಟಿಕತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಮುಂದಿಟ್ಟ ಬೇಡಿಕೆಗಳೇನು?:
ಸಭೆಯಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮನವಿ ಮಾಡಲಾಯಿತು. ಜೊತೆಗೆ ನದಿ ತಿರುವು ಯೋಜನೆಗಳಿಗೆ ಅನುದಾನ ಒದಗಿಸುವಂತೆ ಹಾಗೂ ಕಾಲುವೆಗಳ ಆಧುನೀಕರಣ ಯೋಜನೆಯಡಿ ರಾಜ್ಯದಿಂದ 6,673 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ 3 ಬಂದರುಗಳ ಅಭಿವೃದ್ಧಿ, ರೈಲ್ವೆಯೊಂದಿಗೆ ಜಂಟಿ ಪಾಲುದಾರಿಕೆಯಲ್ಲಿ ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕಾನೂನು ತೊಡಕುಗಳು ಮತ್ತು ಪರಿಸರ ಹೋರಾಟಗಳ ಹಿನ್ನೆಲೆಯಲ್ಲಿ ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಇಂತಹ ವ್ಯಾಜ್ಯಗಳ ತ್ವರಿತ ವಿಲೇವಾರಿಗೆ ವ್ಯವಸ್ಥೆ ರೂಪಿಸುವಂತೆ ಮನವಿ ಮಾಡಲಾಯಿತು.
ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಕೈಗೊಳ್ಳಬೇಕಾಗಿರುವ ಹಲವು ಉಪಕ್ರಮಗಳಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ಒದಗಿಸುವಂತೆ ಪ್ರಧಾನ ಮಂತ್ರಿಗೆ ಮನವಿ ಮಾಡಲಾಯಿತು. ಎಲ್ಲ ಸರ್ಕಾರಿ ಕಚೇರಿಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸಲು ಆಪ್ಟಿಕಲ್ ಫೈಬರ್ ನೆಟ್ವರ್ಕ್ ರೂಪಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ 4,300 ಕೋಟಿ ರೂ. ನೆರವು ಒದಗಿಸುವಂತೆ ಕೋರಲಾಯಿತು.