ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಅಬ್ಬರ ಮುಂದುವರೆದಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಯಲ್ಲಿ ಶಾಲಾ ಆರಂಭದ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದು, ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯು ರಾಜಧಾನಿಯಲ್ಲಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಜನವರಿ 24 ರಿಂದ ಎಲ್ಲ ಜಿಲ್ಲೆಗಳಲ್ಲಿ ಶಾಲೆಗಳು ಪುನರ್ ಆರಂಭವಾಗಿವೆ. ಆದರೆ, ಬೆಂಗಳೂರಿನಲ್ಲಿ ಶಾಲಾರಂಭಕ್ಕೆ ಕಾದುನೋಡಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಅದರಂತೆ ಇಂದು ಸಭೆಯಲ್ಲಿ ಚರ್ಚಿಸಿ ಯಾವ ರೀತಿ ಶಾಲೆಗಳು ನಡೆಯಬೇಕು, ಯಾವ ರೀತಿ ಸುರಕ್ಷತಾ ಕ್ರಮ ಪಾಲನೆ ಮಾಡಬೇಕು ಎಂದು ಆದೇಶ ಹೊರಡಿಸಿಲಿದೆ.
ಬೆಂಗಳೂರಿನಲ್ಲಿ ಶಾಲೆ ಆರಂಭಕ್ಕೆ ತಾಂತ್ರಿಕ ಸಲಹಾ ಸಮಿತಿಯು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದೆ. ಸೋಮವಾರದಿಂದ 1 ರಿಂದ 9 ನೇ ತರಗತಿ ಹಾಗೂ ಅಂಗನವಾಡಿ ಕೇಂದ್ರಗಳ ಆರಂಭಕ್ಕೂ ಗ್ರೀನ್‌ಸಿಗ್ನಲ್ ಕೊಟ್ಟಿದ್ದು, ಶಾಲೆಗಳು ಸಂಪೂರ್ಣವಾಗಿ ಮಕ್ಕಳಿಗೆ ಸುರಕ್ಷಿತ ಎಂಬ ವಾತಾವರಣ ನಿರ್ಮಿಸಲು ಸಲಹೆಗಳು ಬಂದಿವೆ.
ಮಕ್ಕಳಿಗೆ ಸೋಂಕು ದೃಢಪಟ್ಟರೆ ಶಾಲೆ ಬಂದ್: ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೆ ಮಾತ್ರ ಶಾಲೆ ಬಂದ್ ಮಾಡಲು ಸೂಚನೆ ನೀಡಲಾಗಿದೆ. 5 ಮಕ್ಕಳಿಗೆ ಸೋಂಕು ಕಂಡು ಬಂದರೆ ಮೂರು ದಿನ ಶಾಲೆ ಬಂದ್, ಎಲ್ಲ ಆಯಾ ಡಿಸಿಗಳ ನಿರ್ಣಯಕ್ಕೆ ಬಿಟ್ಟಿದೆ.
ಜನವರಿ 6 ರಿಂದ ಕೋವಿಡ್ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಬೆಂಗಳೂರು ನಗರ ಹಾಗೂ ಗ್ರಾಮೀಣ ಜಿಲ್ಲಾ ಪ್ರದೇಶದ ಶಾಲೆಗಳಿಗೆ ಭೌತಿಕ ತರಗತಿಗಳನ್ನು ನಿಲ್ಲಿಸಿ, ಆನ್‌ಲೈನ್ ಶಿಕ್ಷಣ ನೀಡಬೇಕು ಎಂದು ಆದೇಶ ನೀಡಲಾಗಿತ್ತು. ಇದರಿಂದ ಹಲವು ಮಕ್ಕಳಿಗೆ ಅನಾನುಕೂಲ ಆಗಿತ್ತು. ಈ ಕುರಿತು ರೂಪ್ಸಾ ಸಂಘಟಕರು ಕೂಡ ಸಿಎಂಗೆ ಪತ್ರವನ್ನ ಬರೆದಿದ್ದರು. ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ ವಿದ್ಯಾಗಮ ಆರಂಭಿಸುವಂತೆ ಮನವಿ ಮಾಡಿದ್ದರು.
ಆನ್ ಲೈನ್ ಪಾಠ - ಪ್ರವಚನ ದೊಡ್ಡ ಶಾಲೆಗಳಿಗೆ ಮಾತ್ರ ಅನುಕೂಲವಾಗಲಿದ್ದು, ಕಾರಣ ಅಲ್ಲಿ ಕಲಿಯುವಂತಹ ಮಕ್ಕಳಲ್ಲಿ ಆನ್ ಲೈನ್ ಗೆ ಪೂರಕವಾದಂತಹ ಪರಿಕರಗಳು ಇರುತ್ತೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಅತ್ಯಂತ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿವೆ. ಅವರ ಬಳಿ ಆನ್‌ಲೈನ್ ಪಾಠ ಕೇಳುವಂತಹ ಪರಿಕರಗಳು ಇಲ್ಲದೇ ಇರುವುದರಿಂದ ವಿದ್ಯಾಗಮ ಅಥವಾ ಕೋವಿಡ್ ಮಾರ್ಗಸೂಚಿಯೊಂದಿಗೆ ತರಗತಿ ಆರಂಭಕ್ಕೆ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಯಾವ ರೀತಿ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ