ಬೆಂಗಳೂರು: ಉಕ್ರೇನ್ ಯುದ್ಧದಲ್ಲಿ ಮೃತಪಟ್ಟಿರುವ ನವೀನ್ ಮೃತದೇಹವನ್ನು ರಾಜ್ಯಕ್ಕೆ ತರುವ ಕುರಿತು ದೆಹಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ವಿವರಗಳನ್ನು ವಿಧಾನ ಪರಿಷತ್ಗೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ, ಉಕ್ರೇನ್ ಯುದ್ಧದಲ್ಲಿ ನವೀನ್ ಸಾವು ಪ್ರಕರಣವನ್ನು ಸಭಾಪತಿ ಬಸವರಾಜ ಹೊರಟ್ಟಿ ಪ್ರಸ್ತಾಪ ಮಾಡಿದರು. ನವೀನ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೆ. ಅವರ ಕುಟುಂಬದ ಸದಸ್ಯರು ಸಾಕಷ್ಟು ನೋವಿನಲ್ಲಿದ್ದಾರೆ. ಬೇರೆ ಮಕ್ಕಳು ಜೀವಂತವಾಗಿ ಬಂದಿದ್ದಾರೆ, ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಗೋಳಾಡುತ್ತಿದ್ದಾರೆ. ತಮ್ಮ ಮಗನ ಮೃತ ದೇಹವನ್ನಾದರೂ ತರುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ಮೃತದೇಹ ತರಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರಧಾನಿಮಂತ್ರಿಗಳು ಈಗಾಗಲೇ ಅಧಿಕಾರಿಗಳಿಗೆ ಎಲ್ಲ ಸೂಚನೆ ನೀಡಿದ್ದಾರೆ. ಸರ್ಕಾರ ನವೀನ್ ಮೃತದೇಹ ತರಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಉಕ್ರೇನ್ನಿಂದ ಚಾಮರಾಜನಗರದ ಯುವತಿ ನನ್ನನ್ನು ಭೇಟಿ ಮಾಡಿದ್ದಳು. ನಮ್ಮ ಭಾರತದ ಅಧಿಕಾರಿಗಳು ಯಾರೂ ಕೂಡ ಉಕ್ರೇನ್ ಒಳಗೆ ಹೋಗೋಕೆ ಆಗಿಲ್ಲ. ಅವರು ಗಡಿ ಪ್ರದೇಶಗಳವರೆಗೆ ಬಂದಿದ್ದಾರೆ. ಅಲ್ಲಿಂದ ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಉಕ್ರೇನ್ ಒಳಗೆ ಹೋಗುವವರನ್ನ ಕಳುಹಿಸಿ ಮೃತದೇಹ ತರಲು ಪ್ರಯತ್ನ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ನವೀನ್ ಮೃತದೇಹ ತರುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಅನೇಕರನ್ನು ವಾಪಸ್ ಕರೆತರುವ ಕೆಲಸ ಆಗಿದೆ. ಇದರಲ್ಲಿ ರಾಜಕೀಯ ಬೇಡ, ಯಾವುದೇ ಸರ್ಕಾರ ಇರಲಿ ಅದಕ್ಕೆ ನಾವು ಕೃತಜ್ಞರು. ಅನೇಕ ದೇಶಗಳಿಗೆ ಕೂಡ ಅವರವರ ಪ್ರಜೆಗಳನ್ನು ಕರೆತರಲು ಆಗಿಲ್ಲ. ಆದರೆ ನಾವು ಸಾಕಷ್ಟು ಕ್ರಮ ವಹಿಸಿದ್ದೇವೆ. ಮೃತದೇಹ ತರುವ ಬಗ್ಗೆ ಪ್ರಧಾನಿಗಳೇ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆದಿದೆ ಎಂದರು.
ಅಂತಿಮವಾಗಿ ದೆಹಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಧ್ಯಾಹ್ನದ ವೇಳೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿ ಚರ್ಚೆಗೆ ತೆರೆ ಎಳೆದರು.