ಬೆಂಗಳೂರು: ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸತತ 3ನೇ ದಿನ ವಲಯವಾರು ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಯಿತು. ಈಗಾಗಲೇ 8 ವಲಯಗಳಲ್ಲಿ 7 ವಲಯಗಳ ಸಭೆ ಮುಗಿದಿದ್ದು, ಕಡೆಯದಾಗಿ 8ನೇ ವಲಯ ದಕ್ಷಿಣ ವಲಯದ ಸಭೆಯನ್ನು ಸಿಎಂ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್ ಉಸ್ತುವಾರಿಯ ಈ ವಲಯದ ವ್ಯಾಪ್ತಿಯ ಸಂಸದ ತೇಜಸ್ವಿ ಸೂರ್ಯ ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ವಲಯದ ಕೋವಿಡ್ ಸ್ಥಿತಿಗತಿ ಅವಲೋಕಿಸಿದ ಸಿಎಂ, ಖಾಸಗಿ ಆಸ್ಪತ್ರೆಗಳ ನಡೆಗೆ ಗರಂ ಆದರು. ಇನ್ಮುಂದೆ ಸರ್ಕಾರದ ನಿಯಮ ಉಲ್ಲಂಘಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಕೊರೊನಾ ಚಿಕಿತ್ಸೆ ನಿರಾಕರಿಸುವ ಹಾಗು ರೋಗಿಯನ್ನು ದಾಖಲಿಸಿಕೊಳ್ಳದ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ತಾಕೀತು ಮಾಡಿದರು.