ಬೆಂಗಳೂರು: ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ಎರಡು ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದು, ಸದ್ಯದಲ್ಲೇ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಹೆಸರು ಪ್ರಕಟಿಸಲಿದೆ.
ನಾಲ್ಕು ಸ್ಥಾನಗಳ ವಿಧಾನ ಪರಿಷತ್ ಚುನಾವಣೆಗೆ ಆಯೋಗ ಸಿದ್ಧತೆ ಆರಂಭಿಸಿರುವಂತೆ ಬಿಜೆಪಿ ಸಜ್ಜುಗೊಳ್ಳುತ್ತಿದೆ. ನಾಲ್ಕು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ.ಸಂಕನೂರು ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಸುಶೀಲ್ ನಮೋಶಿ ಅವರ ಹೆಸರನ್ನು ರಾಜ್ಯ ಬಿಜೆಪಿ ಅಂತಿಮಗೊಳಿಸಿದೆ. ಎರಡೂ ಕ್ಷೇತ್ರಗಳಿಂದಲೂ ಒಂದೊಂದೇ ಹೆಸರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಬಿಜೆಪಿ ರಾಜ್ಯ ಘಟಕ ಕಳುಹಿಸಿಕೊಟ್ಟಿದೆ.
ಎರಡೂ ಕ್ಷೇತ್ರದಲ್ಲೂ ಒಂದೊಂದೇ ಹೆಸರು ಕಳಿಸಿರುವ ಕಾರಣ ಈ ಎರಡೂ ಹೆಸರು ಅಂತಿಮ ಎಂದು ಬಿಜೆಪಿ ಆಪ್ತ ಮೂಲಗಳು ಖಚಿತಪಡಿಸಿವೆ. 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಶಿಲ್ ನಮೋಶಿ ಅವರಿಗೆ ಟಿಕೆಟ್ ಕೈತಪ್ಪಿತ್ತು. ಇದೀಗ ಅವರಿಗೆ ಪಕ್ಷವು ಈಶಾನ್ಯ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುತ್ತಿದೆ. ಇನ್ನು ಸಂಕನೂರು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಪಶ್ಚಿಮ ಪದವೀಧರ ಕ್ಷೇತ್ರದಿಂದ ಮರುಆಯ್ಕೆ ಬಯಸಿದ್ದು ಅವರಿಗೇ ಪಕ್ಷ ಮತ್ತೊಮ್ಮೆ ಟಿಕೆಟ್ ಕೊಡುತ್ತಿದೆ.