ಬೆಂಗಳೂರು : ಕೇವಲ ಮೂರು ತಿಂಗಳ ಅಂತರದಲ್ಲಿ ಮೂವರು ಉಗ್ರರು ಸಿಲಿಕಾನ್ ಸಿಟಿಯಲ್ಲಿ ಅರೆಸ್ಟ್ ಆಗಿದ್ದಾರೆ. ಸಿಲಿಕಾನ್ ಸಿಟಿ ಉಗ್ರರಿಗೆ ಸ್ಲೀಪರ್ ಸೆಲ್ ನೆಲೆಯಾಗುತ್ತಿದೆಯಾ ಎಂಬ ಅನುಮಾನ ಕೂಡ ಉಂಟಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್, ಬಾಂಗ್ಲಾ ಟೆರರ್ ಇದೀಗ ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಶಂಕಿತ ಉಗ್ರ ಅರೆಸ್ಟ್ ಆಗಿದ್ದು ಸಾಕಷ್ಟು ಆತಂಕ ಮೂಡಿಸಿದೆ.
ಸದ್ಯ ಸಿಸಿಬಿ ಪೊಲೀಸರಿಂದ ಅಕ್ತರ್ ಹುಸೇನ್ ಬಂಧನವಾಗಿದ್ದು, ಈ ಹಿಂದೆಯೇ ಇಬ್ಬರು ಉಗ್ರರ ಬಂಧನವಾಗಿತ್ತು. ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಬಾಂಗ್ಲಾ ಮೂಲದ ಉಗ್ರ ಫಾಜಿಲ್ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದ.
ಪಶ್ಚಿಮ ಬಂಗಾಳದಲ್ಲಿ ವಿಜ್ಞಾನಿ, ಬ್ಲಾಗರ್ ಹತ್ಯೆ ಮಾಡಿ ಬೆಂಗಳೂರಲ್ಲಿ ನೆಲೆಸಿದ್ದ ಈತ ಅಕ್ರಮವಾಗಿ ಅಸ್ಸೋಂ ಮೂಲಕ ಭಾರತಕ್ಕೆ ನುಸುಳಿ ಬೆಂಗಳೂರಲ್ಲಿ ನೆಲೆಸಿದ್ದ. ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿ ಕರೆದೊಯ್ದಿದ್ದರು.
ಇದಕ್ಕೂ ಹಿಂದೆ ಶ್ರೀರಾಮಪುರದಲ್ಲಿ ಉಗ್ರ ತಾಲಿಬ್ ಹುಸೇನ್ ನನ್ನ ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ತಾಲಿಬ್ ಹುಸೇನ್ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಶ್ರೀರಾಮಪುರದ ಮಸೀದಿಯಲ್ಲಿ ಆಶ್ರಯ ಪಡೆದಿದ್ದ. ಇನ್ನು ಒಬ್ಬರಾದ ಮೇಲೆ ಒಬ್ಬರಂತೆ ಉಗ್ರರು ಸಿಲಿಕಾನ್ ಸಿಟಿಯಲ್ಲಿ ಸೆರೆಯಾಗ್ತಿದ್ದು, ಇದರಿಂದ ಉಗ್ರರ ಅಡಗುತಾಣವಾಗ್ತಿದ್ಯಾ ಬೆಂಗಳೂರು ಎಂಬ ಅನುಮಾನ ಶುರುವಾಗಿದೆ.
ತಡ ರಾತ್ರಿ ಬಂಧನವಾಗಿರುವ ಶಂಕಿತ ಉಗ್ರ ಅಕ್ತರ್ ಹುಸೇನ್ ಮೂಲಭೂತವಾದಿಯಾಗಿದ್ದ ಎಂದು ತಿಳಿದು ಬಂದಿದೆ. ಉಗ್ರ ಸಂಘಟನೆಗಳಿಗೆ ಸೇರಬೇಕು, ಉಗ್ರ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದ. ಉಗ್ರರೊಂದಿಗೆ ಸಂಪರ್ಕ ಹೊಂದುವ ಬಗ್ಗೆ ಪ್ರಯತ್ನ ನಡೆಸಿದ್ದ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಮೂಲಭೂತವಾದಿಯಾಗಿ ಹಲವಾರು ಪೋಸ್ಟ್ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶಂಕಿತ ಉಗ್ರನ ಬಗ್ಗೆ ಕೇಂದ್ರ ಐಬಿ ಕೂಡ ಮಾಹಿತಿ ಕಲೆ ಹಾಕಿತ್ತು. ಇವರ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಮೂಲತಃ ಅಸ್ಸೋಂನವನಾಗಿದ್ದು, ಕಳೆದ ಎರಡು ವರ್ಷಗಳಿಂದ ಬೆಂಗಳೂರು ತಿಲಕ್ ನಗರದಲ್ಲಿ ವಾಸವಾಗಿದ್ದ. ದಾಳಿ ವೇಳೆ, ಕೆಲ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಶಂಕಿತ ಉಗ್ರ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು
ಜೊತೆಗಿದ್ದ ಮೂವರನ್ನು ಕಸ್ಟಡಿ ಪಡೆದುಕೊಂಡಿಲ್ಲ : ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಸ್ಪಷ್ಟನೆ : ನಗರದಲ್ಲಿ ನೆಲೆಯೂರಿದ್ದ ಮನೆ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಜೊತೆಯಲ್ಲಿದ್ದ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳ ನೆರವಿನಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಿನ್ನೆ ತಿಲಕ್ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಜೊತೆಯಲ್ಲಿ ವಾಸವಿದ್ದ ಅಸ್ಸೋಂ ಮೂಲದ ಮೂವರು ಯುವಕರನ್ನ ಪ್ರಶ್ನಿಸಲಾಗುತ್ತಿದೆ.
ತನಿಖೆಯಲ್ಲಿ ಇವರ ಪಾತ್ರ ಕಂಡುಬಂದರೆ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಉಗ್ರ ಚಟುವಟಿಕೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.
ಗೃಹ ಸಚಿವರಿಂದ ಮೆಚ್ಚುಗೆ : ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಉಗ್ರ ಸಂಘಟನೆ ಯೊಂದಕ್ಕೆ ಸೇರಿದ್ದಾನೆ ಎಂದು ಹೇಳಲಾಗುತ್ತಿರುವ ಶಂಕಿತ ಉಗ್ರನನ್ನ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಉಗ್ರನ ಜೊತೆಗೆ ಇದ್ದ ಸ್ಥಳೀಯ ಸಹಚರರನ್ನು ಸಹ ವಿಚಾರಣೆ ನಡೆದಿದ್ದು, ಅವನು ನಡೆಸಿದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹಾಗೂ ಓಕಳಿಪುರಂನಲ್ಲಿ ನೆಲೆಸಿದ್ದ ಉಗ್ರನನ್ನ ಬೆಂಗಳೂರು ಪೊಲೀಸರು ಬಂಧಿಸಿದ ನಂತರ, ಮತ್ತೊಬ್ಬ ಶಂಕಿತ ಉಗ್ರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ತೂರಿನ ಮೃತರಾದ ಪೊಲೀಸರಿಗೆ ಗೌರವ ನಮನ : ಇದಕ್ಕೂ ಮುನ್ನ ನಗರ ಪೊಲೀಸ್ ಇಲಾಖೆಯಿಂದ ರಸ್ತೆ ಅಪಘಾತದಲ್ಲಿ ಮೃತರಾದ ಪಿಎಸ್ಐ ಅವಿನಾಶ್, ಕಾನ್ ಸ್ಟೇಬಲ್ ಅನಿಲ್ ಭಾವಚಿತ್ರಗಳಿಗೆ ಪುಷ್ಪ ಹಾಕಿ ಗೌರವವನ್ನ ಸೂಚಿಸಿತು. ಬಳಿಕ ಮಾತನಾಡಿದ ಆಯುಕ್ತರು ನಿನ್ನೆ ಚಿತ್ತೂರು ಬಳಿ ನಡೆದ ಅಪಘಾತದಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವ ಪಿಎಸ್ಐ ದೀಕ್ಷಿತ್ ನಗರಕ್ಕೆ ಕರೆತಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮತ್ತೋರ್ವ ಕಾನ್ ಸ್ಟೇಬಲ್ ಸಹ ಚಿತ್ತೂರು ಬಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ : ಆರೋಪಿಗಳ ಬೆನ್ನಟ್ಟಿ ಹೊರಟ ಪೊಲೀಸರು ಮಸಣಕ್ಕೆ; ಅಪಘಾತದಲ್ಲಿ ಪಿಎಸ್‌ಐ ಸೇರಿ ಮೂವರ ದುರ್ಮರಣ