ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊರೊನಾ ಸೋಂಕಿತರು ಮೃತಪಟ್ಟ ದುರಂತಕ್ಕೆ ಸಂಬಂಧಪಟ್ಟಂತೆ ನೈತಿಕ ಹೊಣೆ ಹೊತ್ತು ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವಿಷಯ ತಡವಾಗಿ ಗೊತ್ತಾಗಿದೆ.
ವಿಧಾನಸೌಧದಲ್ಲಿ ನಿನ್ನೆ ನಡೆದ ವಿಶೇಷ ಸಂಪುಟ ಸಭೆಗೆ ರಾಜೀನಾಮೆ ಪತ್ರ ಹಿಡಿದುಕೊಂಡು ಬಂದಿದ್ದರು ಎಂದು ಹೇಳಲಾಗುತ್ತಿದೆ. ದುರಂತ ನಡೆದ ಬಳಿಕ ಕೆಲಸವೇ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರು ತುಂಬಾ ಬೇಸರಗೊಂಡಿದ್ದರು. ಘಟನೆ ಬಗ್ಗೆಯೂ ತುಂಬಾ ನೊಂದಿದ್ದರು. ಇದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದರು.
ಆದರೆ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ರಾಜೀನಾಮೆ ಪತ್ರವನ್ನು ಗಮನಿಸಿ ಗದರಿ, ರಾಜೀನಾಮೆ ಪತ್ರವನ್ನು ಹರಿದು ಹಾಕಿದರು ಎಂದು ತಿಳಿದು ಬಂದಿದೆ.
ಚಾಮರಾಜನಗರ ಜಿಲ್ಲೆಗೆ ಉಸ್ತುವಾರಿಯಾದ ನಂತರ 62 ಬಾರಿ ಹೋಗಿದ್ದೇನೆ. ಅಲ್ಲಿ ಸಭೆಗಳನ್ನು ನಡೆಸಿದ್ದೇನೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಹೆಚ್ಚಿನ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ, ಘಟನೆ ಬಳಿಕ ಕೇಳಿ ಬಂದ ಆರೋಪಗಳು ತುಂಬಾ ಬೇಸರ ತಂದಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಸುರೇಶ್ ಕುಮಾರ್ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರಸ್ಕರಿಸಿದ್ದು, ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಮನವೊಲಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಚಿವ ಮಾಧುಸ್ವಾಮಿ ಅವರ ಮನವೊಲಿಸಿ ಸುರೇಶ್ ಕುಮಾರ್ ಅವರನ್ನು ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.