ಬೆಂಗಳೂರು : ಯಾವುದೇ ಸಂಘಟನೆಗಳು ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ಆಲೋಚನೆ ಮಾಡಬಾರದು, ಮುಂದಿನ ದಿನಗಳಲ್ಲಿ ಸಂಘಟನೆಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ವಿವಿಧ ಪ್ರಾಂಶುಪಾಲರು, ಉಪನ್ಯಾಸಕರ ಸಂಘಟನೆಗಳೊಂದಿಗೆ ಸಭೆ ನಡಸಿದ ಸಚಿವ ಸುರೇಶ್ ಕುಮಾರ್, ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ನಿವೃತ್ತಿ ಅಂಚಿನಲ್ಲಿರುವ ಉಪನ್ಯಾಸಕರಿಗೆ ಬಿಇಡಿ ಪದವಿಯಿಂದ ವಿನಾಯಿತಿಯನ್ನು ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆಯಲು ಈಗಾಗಲೇ ಒಪ್ಪಿಗೆ ನೀಡಲಾಗಿದ್ದು, ಉಪನ್ಯಾಸಕರಿಂದ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿಯನ್ನು ನೀಡಲು ಈಗಾಗಲೇ ತಾವು ಕಡತವನ್ನು ಅನುಮೋದಿಸಿದ್ದು ಇಷ್ಟರಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.
ಪದವಿಪೂರ್ವ ಕಾಲೇಜುಗಳಲ್ಲಿ ಎನ್ ಸಿ ಇ ಆರ್ ಟಿ ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಟ ಸಂಖ್ಯೆಯನ್ನು 40 ವಿದ್ಯಾರ್ಥಿಗಳಿಗೆ ನಿಗದಿಗೊಳಿಸುವ ಬಗ್ಗೆ ಸಕಾರಾತ್ಮಕವಾದ ನಿರ್ಣಯವನ್ನು ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ಉಪನ್ಯಾಸಕರಿಗೆ ಕಾಲಮಿತಿ ವೇತನ ಬಡ್ತಿಗಳನ್ನು ಮಂಜೂರು ಮಾಡುವ ಅಧಿಕಾರ ಇಷ್ಟು ದಿನ ಕೇಂದ್ರ ಕಛೇರಿಯು ನಿರ್ವಹಿಸುತ್ತಿದ್ದು, ಇದನ್ನು ಇನ್ನು ಮುಂದೆ ಜಿಲ್ಲಾ ಉಪನಿರ್ದೇಶಕರುಗಳಿಗೆ ಪ್ರತ್ಯಾಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಕೊರತೆಯಿರುವ ಪರಿಚಾರಕರ ಸೇವೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪಡೆಯುವಲ್ಲಿ ಅಗತ್ಯ ಅನುಮತಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇತ್ತ ಅನುದಾನಿತ ಪದವಿಪೂರ್ವ ಕಾಲೇಜುಗಳ ವೇತನ ಪಾವತಿಯಾಗುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ ಸಚಿವರು ಸಕಾಲದಲ್ಲಿ ವೇತನ ಬಿಡುಗಡೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಉಪನ್ಯಾಸಕರ ವೇತನ ತಾರತಮ್ಯವನ್ನು ಸರಿಪಡಿಸುವ ಕುರಿತಂತೆ ಕೂಡಲೇ ವಿವಿಧ ಸಂಘಟನೆಗಳ ಮುಖ್ಯಸ್ಥರೊಂದಿಗೆ ತಮ್ಮ ಹಂತದಲ್ಲಿ ಮುಂದಿನ ಹದಿನೈದು ದಿನಗಳಲ್ಲಿ ಚರ್ಚಿಸಿ ಕಡತದಲ್ಲಿ ವರದಿ ನೀಡಿ ಅನುಮೋದನೆಯನ್ನು ಪಡೆಯಲು ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಿಗೆ ಸೂಚಿಸಿದರು.