ಆನೇಕಲ್ : ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ-ಆನೇಕಲ್ ಕೋವಿಡ್ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಸುರೇಶ್ ಕುಮಾರ್ ಇಂದು ಆನೇಕಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆನೇಕಲ್-ಚಂದಾಪುರ ರಸ್ತೆಯ ಅಲಯನ್ಸ್ ಯೂನಿವರ್ಸಿಟಿಯ ಸಭಾಂಗಣದಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳೊಡನೆ ಸಂವಾದ ನಡೆಸಿದರು. ಮುಖ್ಯವಾಗಿ ಆನೇಕಲ್ ಪಕ್ಕದ ಹೈರಿಸ್ಕ್ ರಾಜ್ಯ ತಮಿಳುನಾಡಿಗೆ ಹೊಂದಿಕೊಂಡಿರುವ ಹಾಗು ಐದು ಕೈಗಾರಿಕಾ ವಲಯದೊಂದಿಗೆ ತಮಿಳುನಾಡಿನ ಸಿಪ್ಕಾಟ್ ಕೈಗಾರಿಕಾ ಪ್ರದೇಶದ ಜನವಸತಿ ಇಲ್ಲಿ ವಾಸಿಸುತ್ತಿರುವುದು ಮತ್ತು ಕೆ.ಆರ್.ಮಾರ್ಕೆಟ್ ಹುಸ್ಕೂರು ಬಳಿಗೆ ಸ್ಥಳಾಂತರಿಸಿದ್ದೂ ಹೆಚ್ಚಿನ ಸೋಂಕು ಹರಡಲು ಕಾರಣ ಎಂದು ಮಾಹಿತಿ ಪಡೆದರು.
ಹೆಚ್ಚುವರಿ ಉಸ್ತುವಾರಿ ಸಚಿವರ ಭೇಟಿಯಿದ್ದರೂ ತಾಲೂಕು ವೈದ್ಯಾಧಿಕಾರಿ ಕನಿಷ್ಟ ಸಾಮಾನ್ಯ ಸ್ಥಿತಿಗತಿಯ ವರದಿ ತಯಾರಿಸಿಕೊಳ್ಳದೆ ಸಹಾಯಕ್ಕೂ ಯಾರನ್ನೂ ನೇಮಿಸದೆ ಉಡಾಫೆಯಾಗಿ ಉತ್ತರಿಸುತ್ತಿದ್ದನ್ನು ಗಮನಿಸಿದ ಸಚಿವರು ಬೇಸರ ವ್ಯಕ್ತಪಡಿಸಿದರು.
ಕೊಟ್ಟ ವರದಿಯಲ್ಲೂ ತಪ್ಪುಗಳಿದ್ದ ಈ ಕುರಿತು ಸ್ಪಷ್ಟನೆ ಕೇಳಿದಾಗ ತಡವರಿಸಿದ ವೈದ್ಯಾಧಿಕಾರಿ ಜ್ಞಾನಪ್ರಕಾಶ್ ನೀಡಿದ ಸುಳ್ಳು ಸ್ಪಷ್ಟನೆಗೆ ಖುದ್ದು ಸರ್ಕಾರಿ ಆಸ್ಪತ್ರೆಯೆಡೆಗೆ ಧಾವಿಸಿದರು. ಆಸ್ಪತ್ರೆಯಲ್ಲಿ ನೋಡಿದಾಗ ವೈದ್ಯಾಧಿಕಾರಿ ಇದೆ ಎಂದು ಹೇಳಿದ ಐಸಿಯು ಇಲ್ಲದೇ ಇದ್ದದ್ದು ಕಂಡು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಉಳಿದಂತೆ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಸಚಿವರೊಂದಿಗೆ ಇದ್ದು ಮಾಹಿತಿ ನೀಡಿದರು.