ಬೆಂಗಳೂರು: ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಸಲ್ಲಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆಯ 15ನೇ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ, 299 ಕಟ್ಟಡಗಳನ್ನು ಸಕ್ರಮಗೊಳಿಸಿ ಆದೇಶ ಹೊರಡಿಸಿದೆ. ಈವರೆಗೆ ಒಟ್ಟು 3124 ಕಟ್ಟಡಗಳನ್ನು ಸುಪ್ರೀಂ ಸಕ್ರಮಗೊಳಿಸಿದೆ.
ನ್ಯಾಯಾಲಯದ ಆದೇಶದಂತೆ ಡಾ.ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಕಟ್ಟಡಗಳ ಮಾಲೀಕರಿಗೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮ ಪ್ರಮಾಣ ಪತ್ರವನ್ನು ವಿತರಿಸುವಂತೆಯೂ ಹಾಗೂ ಕಾನೂನು ರೀತಿ ಬೆಟರ್ ಮೆಂಟ್ ಶುಲ್ಕ ವಿಧಿಸುವಂತೆಯೂ ನ್ಯಾಯಾಲಯ ಸೂಚಿಸಿದೆ ಎಂದು ಬಿಡಿಎ ತಿಳಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಕ್ರಮಗೊಂಡ ಕಟ್ಟಡಗಳ ಮಾಲೀಕರಿಗೆ ಸಕ್ರಮ ಪ್ರಮಾಣ ಪತ್ರವನ್ನು ಡಾ. ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ ಮೇಡಿ ಅಗ್ರಹಾರದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮೇ 13 ರಿಂದ ವಿತರಿಸಲು ಆರಂಭಿಸಿದೆ.
ಸೋಮವಾರದಿಂದ ಶುಕ್ರವಾರದ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಕ್ರಮ ಪ್ರಮಾಣ ಪತ್ರ ವಿತರಣೆ ಕಾರ್ಯ ನಡೆಯುತ್ತಿದ್ದು, ಆಯಾ ದಿನಕ್ಕೆ ಹಾಗೂ ಸಮಯಕ್ಕೆ ಸಾರ್ವಜನಿಕರು ಹಾಜರಾಗುವ ಕುರಿತು ಎಸ್.ಎಮ್.ಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಫಲಾನುಭವಿಗಳು ಸಕ್ರಮ ಪ್ರಮಾಣ ಪತ್ರವನ್ನು ಪಡೆಯಲು ತಮ್ಮೊಂದಿಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್‌ಕಾರ್ಡ್, ಸಮಿತಿಯಿಂದ ಸ್ವೀಕರಿಸಿರುವ ಎಸ್.ಎಂ.ಎಸ್. ಸಾಫ್ಟ್ ಕಾಪಿ ಹಾಗೂ ಸಮಿತಿಯು ನೀಡಿರುವ ರಸೀದಿಯನ್ನು ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
(ಇದನ್ನೂ ಓದಿ: ಬಿಡಿಎಯಿಂದ ಗುಡ್ ನ್ಯೂಸ್ : ಹೊಸ ನಿಯಮ ಜಾರಿ, ತೆರಿಗೆ ಪಾವತಿಗೆ ಡಿಸ್ಕೌಂಟ್!!)